ಇತ್ತೀಚಿಗಷ್ಟೇ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿರುವ ಕಾಂಗ್ರೆಸ್ ಮಿಕ್ಕ 100 ಕ್ಷೇತ್ರಗಳ ಅಭ್ಯರ್ಥಿಗಳ ಅಂತಿಮ ಆಯ್ಕೆ ಬಗ್ಗೆ ಚರ್ಚಿಸಲು ಇಂದು ಸ್ಕ್ರೀನಿಂಗ್ ಕಮಿಟಿ ಸಭೆ ಆಯೋಜಿಸಿದೆ. ಅಧ್ಯಕ್ಷ ಮೋಹನ್ ಪ್ರಕಾಶ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ರಾಜ್ಯ ಉಸ್ತುವಾರಿ ರಣ್ ದೀಪ್ ಸಿಂಗ್ ಸುರ್ಜೇವಾಲಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಯಾವುದೇ ಸಮಸ್ಯೆಯಿಲ್ಲದ ಕ್ಷೇತ್ರಗಳ ಪಟ್ಟಿಯನ್ನು ಮೊದಲು ಬಿಡುಗಡೆ ಮಾಡಿ ವಿವಾದದಿಂದ ಪಾರಾಗಿದ್ದ ಕಾಂಗ್ರೆಸ್ ಗೆ ಎರಡನೇ ಪಟ್ಟಿಯಲ್ಲಿ ಅಗ್ನಿ ಪರೀಕ್ಷೆಯೇ ಎದುರಾಗಲಿದೆ. ಟಿಕೆಟ್ ವಂಚಿತರು ಪಕ್ಷಾಂತರ ಹಾಗೂ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದಾದ ಸಾಧ್ಯತೆಗಳಿರುವುದರಿಂದ ಅವುಗಳನ್ನು ಪರಿಣಾಮಕಾರಿಯಾಗಿ ನಿವಾರಿಸಿಕೊಳ್ಳುವ ಪರಿಹಾರೋಪಾಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಉಳಿದ ಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡುವ ಬಗ್ಗೆಯೂ ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆ ನಡೆಯಲಿದೆ. ಸಾಧ್ಯವಾದಷ್ಟೂ ಶೀಘ್ರದಲ್ಲಿ ಪಟ್ಟಿ ಬಿಡುಗಡೆ ಮಾಡುವುದರಿಂದ ಅಭ್ಯರ್ಥಿಗಳಿಗೆ ಪ್ರಚಾರಕಾರ್ಯ ನಡೆಸಲು ಸಾಕಷ್ಟು ಸಮಯಾಕಾಶ ಸಿಗುವುದರಿಂದ ವಿಳಂಬವಾಗುವುದನ್ನು ತಡೆಯುವುದರ ಬಗ್ಗೆಯೂ ಕಾಂಗ್ರೆಸ್ ಹಿರಿಯ ಮುಖಂಡರು ಮಾತುಕತೆ ನಡೆಸಲಿದ್ದಾರೆ.