ಬೆಂಗಳೂರು : ಶಿಕಾರಿಪುರದ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಆರೋಪಿಸಿ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಮನೆಮುಂದೆ ಪ್ರತಿಭಟನೆ ನಡೆಸಿದರು. ಯಡಿಯೂರಪ್ಪ ಪುತ್ರನನ್ನು ಗೆಲ್ಲಿಸಲು ಮ್ಯಾಚ್ ಫಿಕ್ಸಿಂಗ್ ನಡೆದಿದೆ. ಹೀಗಾಗಿ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ ಎಂದು ಕೈ ಕಾರ್ಯಕರ್ತರು ಧಿಕ್ಕಾರ ಕೂಗಿದರು.
ಕಾಂಗ್ರೆಸ್‍ನಿಂದ ಶಿಕಾರಿಪುರದಲ್ಲಿ ಗೋಣಿ ಮಹಾಂತೇಶ್‍ಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಸಮರ್ಥ ನಾಯಕ ನಾಗರಾಜ್ ಗೌಡರಿಗೆ ಟಿಕೆಟ್ ನೀಡಬೇಕಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ನಾಗರಾಜ್ ಗೌಡರಿಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೇ ಗೋಣಿ ಮಹಾಂತೇಶ್ ಗೆ ಟಿಕೆಟ್ ನೀಡಿದರೆ ಪಕ್ಷ ಮುಳುಗುವುದರಲ್ಲಿ ಸಂದೇಹವೇ ಇಲ್ಲ. ಈ ಸಂಗತಿ ತಿಳಿದಿದ್ದರೂ ಸಹ ಸಿದ್ದರಾಮಯ್ಯ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ಕಾರ್ಯಕರ್ತರೊಡನೆ ಮಾತಿನ ಚಕಮಕಿ ಕೂಡ ನಡೆಯಿತು.