ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಇಂದು ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ಮತ್ತು ರಾಜಭವನ್ ಚಲೋ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹಾಗೂ ಹಿಂದುಳಿದ ವರ್ಗಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಳ ಎಂದು ಘೋಷಿಸಿತ್ತು. ಆದರೆ ಈ ಬಗ್ಗೆ ಸಂಸತ್ತಿನ್ಲಲಿ ರಾಜ್ಯಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಲಾಗಿತ್ತು. ಸಂವಿಧಾನದ 9ನೇ ಶೆಡ್ಯೂಲ್‍ನಲ್ಲಿ ಸೇರಿಸದೇ ಮೀಸಲಾತಿ ಹೆಚ್ಚಳದ ಬಗ್ಗೆ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿ ಇಂದು ಪ್ರತಿಭಟನೆ ನಡೆಸಲು ಗುರುವಾರ ಕಾಂಗ್ರೆಸ್ ನಿರ್ಧರಿಸಿತ್ತು.
ಆದರೆ ಗುರುವಾರ ರಾತ್ರಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಮೂಲಕ ಕೇಂದ್ರ ಸರ್ಕಾರಕ್ಕೆ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೆ ಸೇರಿಸುವಂತೆ ಮನವಿ ಸಲ್ಲಿಸಿತ್ತು. ಇದರಿಂದ ಕಿಡಿಕಿಡಿಗೊಂಡ ಕಾಂಗ್ರೆಸ್ ನಾವು ಪ್ರತಿಭಟನೆ ಮಾಡುತ್ತೇವೆಂದು ಘೋಷಿಸಿದ ಬಳಿಕ ಬಿಜೆಪಿ ಈ ಬೂಟಾಟಿಕೆ ಮಾಡಿದ್ದಾರೆಂದು ಆರೋಪಿಸಿ ಇಂದು ರಾಜಭವನ ಚಲೋ ಹಮ್ಮಿಕೊಂಡಿತ್ತು.
ಈ ವೇಳೆ ಡಿ.ಕೆ.ಶಿವಕುಮಾರ್ ಹಾಗೂ ಪರಮೇಶ್ವರ್ ಮಾತನಾಡಿ, ಎಸ್‍ಸಿ ಎಸ್‍ಟಿ ಸಮುದಾಯವನ್ನು ಬಿಜೆಪಿ ಮೋಸಗೊಳಿಸುತ್ತಿದೆ. ಶೇ 50 ಕ್ಕಿಂತ ಮೀಸಲಾತಿ ಪ್ರಮಾಣ ಒಟ್ಟಾರೆ ಹೆಚ್ಚಿಸಬಾರದೆಂದು ಸುಪ್ರೀಂಕೋರ್ಟ್ ಆದೇಶವಿದೆ. ಅದು ಹೇಗೆ ಬಿಜೆಪಿ ಸರ್ಕಾರ ಕಾರ್ಯಸಾಧುವಲ್ಲದ ಶೇ 56 ಮೀಸಲಾತಿ ಘೋಷಣೆ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಜೊತೆಗೆ ಚುನಾವಣಾ ಸಮಯದಲ್ಲಿ ದಲಿತರ ಮತವನ್ನು ಸೆಳೆಯುವ ಸಲುವಾಗಿ ಬಿಜೆಪಿ ಇಂಥಾ ಕೃತ್ಯದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಭವನ ಮುತ್ತಿಗೆ ಹಾಕುವ ಕೈ ನಾಯಕನರ ಪ್ರಯತ್ನವನ್ನು ಪೊಲೀಸರು ಮಧ್ಯದಲ್ಲೇ ತಡೆದು, ಕೆಲವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ.