ಚುನಾವಣೆ ಸನ್ನಿಹಿತವಾಗಿರುವಾಗ ರಾಜ್ಯ ಸರ್ಕಾರ ಮೀಸಲಾತಿಯನ್ನು ಬಲಾಯಿಸಿ ʼಮಕ್ಮಲ್ ಟೋಪಿʼ ಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಳೆದ 75 ವರ್ಷಗಳ ಭಾರತದ ಇತಿಹಾಸದಲ್ಲಿ ಯಾವುದೇ ರಾಜ್ಯ ಸರ್ಕಾರ ಕೇವಲ 90 ದಿನದಲ್ಲಿ ತನ್ನ ಮೀಸಲಾತಿಯನ್ನು ಮೂರು ಬಾರಿ ಬದಲಾಯಿಸಿರಲಿಲ್ಲ. ಚುನಾವಣೆಯ ದೃಷ್ಟಿಯಿಂದ ಸಮುದಾಯಗಳನ್ನು ವಿಭಜಿಸಿ ಸಮಾಜದಲ್ಲಿ ಪರಸ್ಪರರ ವಿರುದ್ಧ ದ್ವೇಷವನ್ನು ಬಿತ್ತುವ ಉದ್ದೇಶವನ್ನು ಬಿಜೆಪಿ ಹೊಂದಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಪಂಚಮಸಾಲಿ ಲಿಂಗಾಯತರು, 15% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ, ಸರ್ಕಾರ ಶೇ.2ರಷ್ಟು ಹೆಚ್ಚಿಸಿದೆ. ಒಕ್ಕಲಿಗರು 12% ಮೀಸಲಾತಿಗೆ ಒತ್ತಾಯಿಸುತ್ತಿದ್ದರು, ಆದರೆ ಸರ್ಕಾರ ಅವರಿಗೆ 2% ಮೀಸಲಾತಿ ನೀಡಿದೆ. ಮುಸ್ಲಿಂ ಅಲ್ಪಸಂಖ್ಯಾತರಿಗೆ 4% ರ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದು ಅಲ್ಪಸಂಖ್ಯಾತ ಸಮುದಾಯದಲ್ಲಿ ಅನ್ಯಾಯದ ಭಾವನೆಯನ್ನು ಉಂಟುಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ.
ಸಂವಿಧಾನದಲ್ಲಿ ಅವಕಾಶವಿಲ್ಲವೆಂದು ಗೊತ್ತಿದ್ದರೂ ಕೂಡಾ ಪದೇ ಪದೇ ಜಾತಿಗಳ ವರ್ಗೀಕರಣ ಮತ್ತು ಮರುವರ್ಗೀಕರಣವನ್ನು ಮಾಡುತ್ತಿದ್ದು ಮೀಸಲಾತಿಗೆ ಕುರಿತಂತೆ ಬೊಮ್ಮಾಯಿ ಸರ್ಕಾರಕ್ಕೆ ಯಾವುದೇ ಜ್ಞಾನವಿಲ್ಲ. ಈ ಮೀಸಲಾತಿಯು ಜಾರಿಯಾಗುವುದಿಲ್ಲ ಎಂದು ಗೊತ್ತಿದ್ದರೂ, ಸರ್ಕಾರ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದೆ. ಮಂಡಲ್ ವರದಿಯ ಪ್ರಕಾರ ಸಂವಿಧಾನದಲ್ಲಿ ಮೀಸಲಾತಿ ಪ್ರಮಾಣವು 50% ಅನ್ನು ಮೀರಬಾರದು ಎಂದಿದೆ. ಆದರೆ ಸರ್ಕಾರ ಘೋಷಣೆ ಮಾಡಿದ ಪ್ರಸ್ತಾವನೆಯು 56%ಇದ್ದು, ಈ ಪ್ರಸ್ತಾವನೆಯು ಸುಪ್ರೀಂ ಕೋರ್ಟ್ ನಲ್ಲಿ ನಿಲ್ಲುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವನ್ನು EWS ವರ್ಗಕ್ಕೆ ಸೇರಿಸಿರುವ ಕ್ರಮ ಅಸಂವಿಧಾನಿಕ. EWS ವರ್ಗವು ಆರ್ಥಿಕ ಸ್ಥಿತಿ ಮತ್ತು ಆದಾಯದ ಆಧಾರದ ಮೇಲೆ ಸ್ಥಾಪಿತವಾಗಿದೆ ಹೊರತು ಜಾತಿ ಅಥವಾ ಧರ್ಮದ ಆಧಾರದ ಮೇಲೆ ಅಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಇದ್ದಂತೆ, ಮೀಸಲಾತಿ ಹೆಸರಿನಲ್ಲಿ ಸಮಾಜವನ್ನು ವಿಭಜಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.