ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ದೆಹಲಿಯಲ್ಲಿರುವ ಮಹಾತ್ಮಾ ಗಾಂಧಿಯವರ ಸ್ಮಾರಕ ರಾಜ್‌ಘಾಟ್ ಗೆ ಜಮಾಯಿಸಿದ್ದಾರೆ. ರಾಹುಲ್ ಗಾಂಧಿಗೆ ಬೆಂಬಲವಾಗಿ ‘ಸಂಕಲ್ಪ ಸತ್ಯಾಗ್ರಹ’ ನಡೆಸುವುದಾಗಿ ಹೇಳಿರುವ ಕಾಂಗ್ರೆಸ್, ಲೋಕಸಭೆಯ ಸದಸ್ಯತ್ವದಿಂದ ರಾಹುಲ್‌ರನ್ನು ಅನರ್ಹಗೊಳಿಸಿರುವುದು ಖಂಡನೀಯ ಎಂದು ಹೇಳಿ ಪ್ರತಿಭಟನೆ ನಡೆಸುತ್ತಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಹಿರಿಯ ನಾಯಕರು ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ. ಗಾಂಧಿ ಅವರ ಅನರ್ಹತೆಯನ್ನು ವಿರೋಧಿಸಿ ಭಾನುವಾರ ಎಲ್ಲಾ ರಾಜ್ಯಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಗಾಂಧಿ ಪ್ರತಿಮೆಗಳ ಮುಂದೆ ಅಹೋರಾತ್ರಿ ಸತ್ಯಾಗ್ರಹ ನಡೆಸಲು ಕಾಂಗ್ರೆಸ್ ಯೋಜಿಸಿದೆ.
ಕಾಂಗ್ರೆಸ್‌ನ ‘ಸಂವಿಧಾನ್ ಬಚಾವೋ, ಲೋಕತಂತ್ರ ಬಚಾವೋ ಸಂಕಲ್ಪ ಸತ್ಯಾಗ್ರಹ’ ರಾಜ್‌ಘಾಟ್‌ನಲ್ಲಿ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸುವ ಮೂಲಕ ಪ್ರಾರಂಭವಾಗಿದೆ. ಸಂಜೆ 5 ಗಂಟೆಯವರೆಗೆ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ರಾಜ್‌ಘಾಟ್‌ನಲ್ಲಿ ಸತ್ಯಾಗ್ರಹ ನಡೆಸಲು ಕಾಂಗ್ರೆಸ್‌ಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಟ್ರಾಫಿಕ್ ಕಾರಣಗಳಿಂದ ವಿನಂತಿಯನ್ನು ತಿರಸ್ಕರಿಸಲಾಗಿದ್ದು, ರಾಜ್‌ಘಾಟ್ ಮತ್ತು ಸುತ್ತಮುತ್ತಲಿನ ಸೆಕ್ಷನ್ 144 ಸಿಆರ್‌ಪಿಸಿ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ವರದಿಯಾಗಿದೆ.