ಲಿಂಗಸುಗೂರು: ಕಾಂಗ್ರೆಸ್ ಮುಖಂಡ ಎಚ್.ಬಿ.ಮುರಾರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯಿಸಿ ಅವರ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಶನಿವಾರ ಇಲ್ಲಿನ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಕೊರಳಿಗೆ ಮಣ್ಣಿನ ಮಡಿಕೆ ಮತ್ತು ಸೊಂಟಕ್ಕೆ ಪೊರಕೆ (ಕಸಬರಿಗೆ) ಕಟ್ಟಿಕೊಂಡು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಟಿಕೆಟ್ ನೀಡುವಂತೆ ಆಗ್ರಹಿಸಿದರು.
ಮಾದಿಗ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡಬೇಕು ಎಂಬ ಬರಹವುಳ್ಳ ಫಲಕವನ್ನು ಹಿಡಿದ ಪ್ರತಿಭಟನಾಕಾರರು, ‘ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾಗಿ ಲಿಂಗಸುಗೂರು ಕ್ಷೇತ್ರದಲ್ಲಿ ವಿವಿಧ ನೀರಾವರಿ ಯೋಜನೆಗಳ ಮಂಜೂರಾತಿಗೆ ಹೋರಾಟ, ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ ಎಂದರು.
ಮಾದಿಗ ಸಮುದಾಯವು ಏಳೂವರೆ ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ. ಆದರೆ, ನಮ್ಮ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಲು ಪಕ್ಷವು ಹಿಂಜರಿಯುತ್ತಿರುವುದು ಸರಿಯಲ್ಲ. ಎಚ್.ಬಿ.ಮುರಾರಿ ಅವರಿಗೆ ಟಿಕೆಟ್ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜೆ.ಬಾಬು ಹಟ್ಟಿ, ಅಸ್ಕಿಹಾಳ ನಾಗರಾಜ, ಸಂದೀಪ ಮುರಾರಿ, ಪಂಪಾಪತಿ ಪರಂಗಿ, ಪ್ರದೀಪ, ಅನೀಲ, ಮುತ್ತಣ್ಣ, ಪರಶುರಾಮ ಅಂಕುಶದೊಡ್ಡಿ, ಬಸಪ್ಪ ಹುಲಿಗುಡ್ಡ, ದುರುಗಾರಾಜ್ ವಟಗಲ್ಲ, ಮೌನೇಶ ಮೆದಕಿನಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.