Saturday, January 25, 2025
Homeಟಾಪ್ ನ್ಯೂಸ್ನಂದಿನಿ ಸಂಸ್ಥೆ ಮುಳುಗಿಸಲು ಬಿಜೆಪಿ ಬಿಲ ತೊಡುತ್ತಿದೆ: ಡಿ.ಕೆ. ಸುರೇಶ್ ಕಿಡಿ

ನಂದಿನಿ ಸಂಸ್ಥೆ ಮುಳುಗಿಸಲು ಬಿಜೆಪಿ ಬಿಲ ತೊಡುತ್ತಿದೆ: ಡಿ.ಕೆ. ಸುರೇಶ್ ಕಿಡಿ

ಬೆಂಗಳೂರು: ಕನ್ನಡಿಗರು ಕಟ್ಟಿ ಬೆಳೆಸಿದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳನ್ನು ಮುಳುಗಿಸಿರುವ ಬಿಜೆಪಿ ಈಗ ಕನ್ನಡಿಗರ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಮುಳುಗಿಸಲು ಚುನಾವಣೆ ಸಮಯದಲ್ಲಿ ಬಿಲ ತೋಡುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ವಾಗ್ದಾಳಿ ನಡೆಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುರೇಶ್ ಅವರು ‘ರಾಜ್ಯದಲ್ಲಿ 28 ಲಕ್ಷ ರೈತ ಕುಟುಂಬಗಳು ಕ್ಷೀರ ಕ್ಷೇತ್ರವನ್ನು ಅವಲಂಬಿಸಿವೆ. ಅವರಿಗೆ ಇದರಿಂದ ಹೆಚ್ಚಿನ ಆದಾಯ ಸಿಗದಿದ್ದರೂ ಪ್ರತಿ ಹದಿನೈದು ದಿನಕ್ಕೆ ಅವರಿಗೆ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ 2.50 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಪ್ರಾಥಮಿಕ ಹಾಲು ಸಹಕಾರ ಸಂಘಗಳ ಮೂಲಕ ಸುಮಾರು 50 ಸಾವಿರ ಜನ ಉದ್ಯೋಗ ನಂಬಿ ಬದುಕುತ್ತಿದ್ದಾರೆ.

ಕರ್ನಾಟಕದ ಮೇಲೆ ಕೆಲವರು ಕಣ್ಣು ಹಾಕಿದ್ದು, ಚುನಾವಣೆ ಸಮಯದಲ್ಲಿ ಅಮುಲ್ ಎಂಬ ಸಹಕಾರಿ ಸಂಸ್ಥೆ ಮೂಲಕ ಕರ್ನಾಟಕದೊಳಗೆ ನುಸುಳಲು ಬಿಲ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅಮೂಲ್ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದ್ದು, ಈ ಸಂಸ್ಥೆ ಮೇಲೆ ಮೇಲೆ ಸಾಕಷ್ಟು ಗೌರವವೂ ಇದೆ. ಆದರೆ ಕನ್ನಡಿಗರು, ಕೆಎಂಎಫ್ ಗುಜರಾತಿಗಳು ಹಾಗೂ ಸಹಕಾರ ಕ್ಷೇತ್ರಕ್ಕೆ ಯಾವ ಅನ್ಯಾಯ ಮಾಡಿದೆ ಎಂದು ಈ ರೀತಿ ಷಡ್ಯಂತ್ರ ರೂಪಿಸುತ್ತಿದ್ದಾರೆ ತಿಳಿಯುತ್ತಿಲ್ಲ ಎಂದು ಹೇಳಿದರು.

ಮೋದಿ ಅವರು ಬಂದ ನಂತರ ಸಾರ್ವಜನಿಕ ವಲಯಗಳ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಿ ಆಗಿದೆ. ನಂತರ ಕರ್ನಾಟಕದ ಬ್ಯಾಂಕುಗಳಾದ ಸಿಂಡಿಕೇಟ್, ಕೆನರಾ, ವಿಜಯಾ ಹಾಗೂ ಕಾರ್ಪೋರೇಷನ್ ಬ್ಯಾಂಕುಗಳನ್ನು ವಿಲೀನದ ಹೆಸರಲ್ಲಿ ನಾಶ ಮಾಡಲಾಗಿದೆ. ಕೆನರಾ ಎಂಬ ಹೆಸರನ್ನು ನಮ್ಮ ಕರಾವಳಿ ಭಾಗದ ಜನ ಬಹಳ ಹೆಮ್ಮೆಯಿಂದ ಬಳಸುತ್ತಾರೆ. ಇಂತಹ ಹೆಸರಿನ ಬ್ಯಾಂಕ್ ಅನ್ನು ಬಿಜೆಪಿ ಸಂಸದರು ಹೇಗೆ ಬಿಟ್ಟುಕೊಟ್ಟರು ಎಂಬುದು ಅರ್ಥವಾಗುತ್ತಿಲ್ಲ. ಈಗ ಇವರು ನಮ್ಮ ನಂದಿನಿ ಸಂಸ್ಥೆ ಮೇಲೆ ಕಣ್ಣಿಟ್ಟಿದ್ದು, ಇದನ್ನು ನುಂಗಲು ಕಾಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹೆಚ್ಚಿನ ಸುದ್ದಿ

error: Content is protected !!