Monday, June 15, 2026
Homeಟಾಪ್ ನ್ಯೂಸ್IRAN WAR: ಅಮೆರಿಕ-ಇರಾನ್ ನಡುವೆ ಮತ್ತೆ ಸಂಘರ್ಷ- ಕುವೈತ್, ಬಹ್ರೇನ್ ಕಡೆಗೆ ಕ್ಷಿಪಣಿ ದಾಳಿ

IRAN WAR: ಅಮೆರಿಕ-ಇರಾನ್ ನಡುವೆ ಮತ್ತೆ ಸಂಘರ್ಷ- ಕುವೈತ್, ಬಹ್ರೇನ್ ಕಡೆಗೆ ಕ್ಷಿಪಣಿ ದಾಳಿ

ದುಬೈ: ಗಲ್ಫ್ ವಲಯದಲ್ಲಿ ಇರಾನ್ (Iran) ಮತ್ತು ಅಮೆರಿಕ (America) ಪಡೆಗಳ ನಡುವೆ ಮತ್ತೆ ಸಂಘರ್ಷ (War) ತಾರಕಕ್ಕೇರಿದೆ. ಕುವೈತ್ (Kuwait) ಹಾಗೂ ಬಹ್ರೇನ್ (Bahrain) ದೇಶಗಳನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಅಮೆರಿಕದ ಮಿಲಿಟರಿ ಪಡೆಗಳು ಯಶಸ್ವಿಯಾಗಿ ಹೊಡೆದುರುಳಿಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಈ ದಾಳಿಗಳ ಬೆನ್ನಲ್ಲೇ ಅಮೆರಿಕ ಪಡೆಗಳು ಇರಾನ್‌ನ ಆಯಕಟ್ಟಿನ ಪ್ರದೇಶವಾದ ಕೇಶ್ಮ್ (Qeshm) ದ್ವೀಪದ ಮೇಲೆಯೂ ಪ್ರತಿದಾಳಿ ನಡೆಸಿವೆ.

ಇರಾನ್ ಉಡಾಯಿಸಿದ್ದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಕುವೈತ್ ತಲುಪುವ ಮೊದಲೇ ದಾರಿಯಲ್ಲೇ ಪತನಗೊಂಡರೆ, ಬಹ್ರೇನ್ ಕಡೆಗೆ ನುಗ್ಗುತ್ತಿದ್ದ ಮೂರು ಕ್ಷಿಪಣಿಗಳನ್ನು ಅಮೆರಿಕ ಮತ್ತು ಬಹ್ರೇನ್ ಜಂಟಿ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಇದಲ್ಲದೆ, ಈ ಭಾಗದ ಸಮುದ್ರದಲ್ಲಿ ಸಂಚರಿಸುತ್ತಿದ್ದ ನಾಗರಿಕ ಹಡಗುಗಳ ಮೇಲೆ ಇರಾನ್ ಉಡಾಯಿಸಿದ್ದ ಮೂರು ಡ್ರೋನ್‌ಗಳನ್ನು ಸಹ ಅಮೆರಿಕದ ಮಿಲಿಟರಿ ಹೊಡೆದುರುಳಿಸಿದೆ. ತಮ್ಮ ದೇಶದ ವಾಯು ರಕ್ಷಣಾ ವ್ಯವಸ್ಥೆಯು ಈ ದಾಳಿಗಳನ್ನು ಯಶಸ್ವಿಯಾಗಿ ತಡೆದಿದೆ ಎಂದು ಕುವೈತ್ ಮಿಲಿಟರಿ ಕೂಡ ಖಚಿತಪಡಿಸಿದೆ.

ಕ್ಷಿಪಣಿ ದಾಳಿಗೆ ಪ್ರತಿಯಾಗಿ ಅಮೆರಿಕ ಪಡೆಗಳು ಕೇಶ್ಮ್ ದ್ವೀಪದಲ್ಲಿದ್ದ ಇರಾನ್ ಮಿಲಿಟರಿಯ ನೆಲೆಯೊಂದನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಬಳಿ ಈ ದ್ವೀಪವಿದ್ದು, ಕಳೆದ ಫೆಬ್ರವರಿಯಿಂದಲೇ ಇರಾನ್ ಈ ಮಾರ್ಗವನ್ನು ಬಂದ್ ಮಾಡಿದೆ. ಇತ್ತೀಚೆಗಷ್ಟೇ ಅಮೆರಿಕ ವಿಧಿಸಿರುವ ದಿಗ್ಬಂಧನವನ್ನು ಮೀರಿ ಇರಾನ್ ಬಂದರಿನ ಕಡೆಗೆ ಸಾಗುತ್ತಿದ್ದ ಆರನೇ ಹಡಗನ್ನು ಅಮೆರಿಕ ಮಿಲಿಟರಿ ತಡೆದು ನಿಲ್ಲಿಸಿತ್ತು. ಈ ಎಲ್ಲಾ ಬೆಳವಣಿಗೆಗಳು ಗಲ್ಫ್ ರಾಷ್ಟ್ರಗಳಲ್ಲಿ ತೀವ್ರ ಆತಂಕ ಸೃಷ್ಟಿಸಿವೆ.

ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ ಎಂಬ ಇರಾನ್ ಕ್ರಾಂತಿಕಾರಿ ಪಡೆಯ ವಾದವನ್ನು ಅಮೆರಿಕ ಸಂಪೂರ್ಣವಾಗಿ ತಳ್ಳಿಹಾಕಿದೆ. ಇರಾನ್ ನಡೆಸಿದ ಎಲ್ಲಾ ದಾಳಿಗಳು ವಿಫಲವಾಗಿದ್ದು, ಅಮೆರಿಕದ ಯಾವುದೇ ಸೈನಿಕರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಿಂದ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಜಾರಿಯಲ್ಲಿದ್ದರೂ, ಶಾಂತಿ ಮಾತುಕತೆಗಳು ಯಶಸ್ವಿಯಾಗದ ಕಾರಣ ಪ್ರಸ್ತುತ ಪರಿಸ್ಥಿತಿ ಕೈಮೀರುತ್ತಿದೆ. ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಘರ್ಷ ಹೆಚ್ಚುತ್ತಿರುವುದು ಈ ಕದನ ವಿರಾಮ ಕೊನೆಗೊಳ್ಳಲು ಕಾರಣವಾಗಬಹುದು ಎಂದು ಇರಾನ್ ಎಚ್ಚರಿಸಿದೆ.

ಇದನ್ನೂ ಓದಿ : ದೇಶೀಯ ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಮತ್ತೊಂದು ಸಾಧನೆ, ರುದ್ರಂ-೨ ಕ್ಷಿಪಣಿ ಪರೀಕ್ಷೆ ಯಶಸ್ವಿ

ಹೆಚ್ಚಿನ ಸುದ್ದಿ

Change Language »
error: Content is protected !!