Wednesday, August 19, 2026
Homeಟಾಪ್ ನ್ಯೂಸ್WWE: 10 ಬಾರಿಯ WWE ಚಾಂಪಿಯನ್ ಬ್ರಾಕ್ ಲೆಸ್ನರ್ ನಿವೃತ್ತಿ; ವಿದಾಯಕ್ಕೆ ಕಾರಣವೇನು?

WWE: 10 ಬಾರಿಯ WWE ಚಾಂಪಿಯನ್ ಬ್ರಾಕ್ ಲೆಸ್ನರ್ ನಿವೃತ್ತಿ; ವಿದಾಯಕ್ಕೆ ಕಾರಣವೇನು?

ನವದೆಹಲಿ: ವಿಶ್ವದ ಪ್ರಸಿದ್ಧ ವೃತ್ತಿಪರ ಕುಸ್ತಿಪಟು, ೧೦ ಬಾರಿಯ ಡಬ್ಲ್ಯೂಡಬ್ಲ್ಯೂಇ (WWE) ವರ್ಲ್ಡ್ ಚಾಂಪಿಯನ್ ಹಾಗೂ ಯುಎಫ್‌ಸಿ (UFC) ಹೆವಿವೇಟ್ ಚಾಂಪಿಯನ್ ಬ್ರಾಕ್ ಲೆಸ್ನರ್ (Brock Lesnar) ತಮ್ಮ ಸುದೀರ್ಘ ಕ್ರೀಡಾ ಜೀವನಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ.

ಮಂಗಳವಾರ ಪ್ರಸಾರವಾದ ‘ದಿ ಪ್ಯಾಟ್ ಮೆಕ್‌ಅಫೀ ಶೋ’ನಲ್ಲಿ (The Pat McAfee Show) ಪಾಲ್ಗೊಂಡಿದ್ದ ೪೯ ವರ್ಷದ ಲೆಸ್ನರ್, ತಾವು ವೃತ್ತಿಪರ ಕುಸ್ತಿ ಸೇರಿದಂತೆ ಎಲ್ಲಾ ರೀತಿಯ ಸ್ಪರ್ಧಾತ್ಮಕ ಕ್ರೀಡೆಗಳಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇದೇ ನನ್ನ ಕೊನೆಯ ಪಂದ್ಯ: ಬ್ರಾಕ್ ಲೆಸ್ನರ್

ಕಳೆದ ಶನಿವಾರ ಮಿನ್ನಿಯಾಪೊಲಿಸ್‌ನಲ್ಲಿ ನಡೆದ ‘ಸಮರ್‌ಸ್ಲಾಮ್’ (SummerSlam) ಸರಣಿಯ ‘ಹೆಲ್ ಇನ್ ಎ ಸೆಲ್’ (Hell in a Cell) ಪಂದ್ಯವೇ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವಾಗಿತ್ತು ಎಂದು ಲೆಸ್ನರ್ ತಿಳಿಸಿದ್ದಾರೆ.

ನಾನು ನಿವೃತ್ತಿಯಾಗಿದ್ದೇನೆ ಎಂದು ಜಗತ್ತಿಗೆ ತಿಳಿಸಲು ಇಲ್ಲಿದ್ದೇನೆ. ಶನಿವಾರದ ಪಂದ್ಯ ನನ್ನ ಪಾಲಿಗೆ ತೀವ್ರ ಭಾವುಕ ಕ್ಷಣವಾಗಿತ್ತು. ಈ ವರ್ಷದ ರೇಸಲ್‌ಮೇನಿಯಾದಲ್ಲೇ (WrestleMania) ರಿಂಗ್‌ನಲ್ಲಿದ್ದ ಗ್ಲೌಸ್ ಮತ್ತು ಶೂಗಳನ್ನು ತೆಗೆದಿಟ್ಟು, ಇನ್ಮುಂದೆ ನನ್ನಿಂದ ಸಾಧ್ಯವಿಲ್ಲ ಎಂದುಕೊಂಡಿದ್ದೆ. ಆದರೆ, ಮತ್ತೆ ರಿಂಗ್‌ಗೆ ಇಳಿಯಬೇಕಾಯಿತು. ಶನಿವಾರದ ಪಂದ್ಯವೇ ನನ್ನ ಕೊನೆಯ ಪಂದ್ಯ. ಇನ್ಮುಂದೆ ‘ದಿ ಬೀಸ್ಟ್’ ಕುಸ್ತಿ ಅಖಾಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಸಾಧಾರಣ ಹಳ್ಳಿಯ ಹುಡುಗನಿಂದ ಜಾಗತಿಕ ಸ್ಟಾರ್‌!

ತಮ್ಮ ಯಶಸ್ಸಿನ ಪಯಣವನ್ನು ನೆನಪಿಸಿಕೊಂಡ ಲೆಸ್ನರ್, ನಾನು ಸೌತ್ ಡಕೋಟಾದ ಸಾಧಾರಣ ಫಾರ್ಮ್‌ನಲ್ಲಿದ್ದ ಕೇವಲ ಒಬ್ಬ ಹಳ್ಳಿಯ ಹುಡುಗ. ಆದರೆ ನನ್ನಲ್ಲಿ ದೊಡ್ಡ ಕನಸು ಮತ್ತು ಕಠಿಣ ಪರಿಶ್ರಮ ಪಡುವ ಮನಸ್ಸಿತ್ತು. ೪೯ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿ ನಿವೃತ್ತಿಯಾಗುತ್ತಿರುವುದಕ್ಕೆ ದೇವರಿಗೆ ಹಾಗೂ ನನಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಭಾವುಕರಾದರು.

ಕ್ರೀಡಾ ಜಗತ್ತಿನಲ್ಲಿ ಅಪರೂಪದ ಯಶಸ್ಸು ಕಂಡ ಕೆಲವೇ ಕೆಲವು ಅಥ್ಲೀಟ್‌ಗಳಲ್ಲಿ ಬ್ರಾಕ್ ಲೆಸ್ನರ್ ಪ್ರಮುಖರು. ೨೦೦೦ರಲ್ಲಿ ಮಿನ್ನಿಸೋಟ ವಿಶ್ವವಿದ್ಯಾಲಯದ ಪರವಾಗಿ ಎನ್‌ಸಿಎಎ ಡಿವಿಷನ್ ೧ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್ ಗೆದ್ದುಕೊಂಡರು. ೨೦೦೨ರಲ್ಲಿ ‘ದಿ ರಾಕ್’ ಅವರನ್ನು ಸೋಲಿಸುವ ಮೂಲಕ ತಮ್ಮ ಮೊದಲ ಡಬ್ಲ್ಯೂಡಬ್ಲ್ಯೂಇ ವರ್ಲ್ಡ್ ಚಾಂಪಿಯನ್‌ಷಿಪ್ ಪಟ್ಟಕ್ಕೇರಿದರು. ಒಟ್ಟು ೧೦ ಬಾರಿ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

೨೦೦೩ ಮತ್ತು ೨೦೨೨ರಲ್ಲಿ ‘ರಾಯಲ್ ರಂಬಲ್’ (Royal Rumble) ಹಾಗೂ ೨೦೦೨ರಲ್ಲಿ ‘ಕಿಂಗ್ ಆಫ್ ದಿ ರಿಂಗ್’ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ೨೦೧೪ರ ರೇಸಲ್‌ಮೇನಿಯಾದಲ್ಲಿ ಅಂಡರ್‌ಟೇಕರ್ ಅವರ ಸತತ ೨೧ ಪಂದ್ಯಗಳ ಗೆಲುವಿನ ಸುದೀರ್ಘ ದಾಖಲೆಯನ್ನು (Streak) ಮುರಿಯುವ ಮೂಲಕ ಕ್ರೀಡಾಲೋಕವನ್ನು ಬೆರಗುಗೊಳಿಸಿದ್ದರು.  ೨೦೦೭ರಲ್ಲಿ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ (MMA) ಕ್ಷೇತ್ರಕ್ಕೆ ಕಾಲಿಟ್ಟ ಲೆಸ್ನರ್, ತಮ್ಮ ನಾಲ್ಕನೇ ಪಂದ್ಯದಲ್ಲೇ ರ‍್ಯಾಂಡಿ ಕೌಚರ್ ಅವರನ್ನು ಸೋಲಿಸಿ ಯುಎಫ್‌ಸಿ ಹೆವಿವೇಟ್ ಚಾಂಪಿಯನ್ ಪಟ್ಟಕ್ಕೇರಿದ್ದರು.

ಹೆಚ್ಚಿನ ಸುದ್ದಿ

Change Language »
error: Content is protected !!