ಬೆಂಗಳೂರು : ತೆರಿಗೆ ಹಂಚಿಕೆ ಹಾಗೂ ಜಿಎಸ್‌ಟಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಡಿದ್ದ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಶನಿವಾರ ಈ ಕುರಿತು ವಾಗ್ದಾಳಿ ನಡೆಸಿರುವ ಅವರು, ವಿಜಯೇಂದ್ರ ಅವರೇ , ನೀವಿನ್ನೂ ಆಡಳಿತಕ್ಕೆ ಹೊಸಬರು. ತೆರಿಗೆ – ಅನುದಾನ – ಜಿಎಸ್‌ಟಿ ಇತ್ಯಾದಿ ವಿಚಾರಗಳೆಲ್ಲ ನಿಮ್ಮ ಪೂಜ್ಯ ತಂದೆಯವರಾದ ಬಿ.ಎಸ್.ಯಡಿಯೂರಪ್ಪನವರಿಗೇ ಅರ್ಥವಾಗಿಲ್ಲ, ನಿಮಗೆಷ್ಟು ಅರ್ಥವಾಗಬಹುದು? ಎಂದು ಕಾಲೆಳೆದಿದ್ದಾರೆ.
ಮಾನ್ಯ @BYVijayendra ಅವರೇ, ನೀವಿನ್ನೂ ಆಡಳಿತಕ್ಕೆ ಹೊಸಬರು. ತೆರಿಗೆ – ಅನುದಾನ – ಜಿಎಸ್‌ಟಿ ಇತ್ಯಾದಿ ವಿಚಾರಗಳೆಲ್ಲ ನಿಮ್ಮ ಪೂಜ್ಯ ತಂದೆಯವರಾದ ಬಿ.ಎಸ್.ಯಡಿಯೂರಪ್ಪನವರಿಗೇ ಅರ್ಥವಾಗಿಲ್ಲ, ನಿಮಗೆಷ್ಟು ಅರ್ಥವಾಗಬಹುದು? ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಿಮ್ಮದೇ @BJP4India ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮಾಡುತ್ತಿರುವ…
— Siddaramaiah (@siddaramaiah) November 2, 2024
ಜೊತೆಗೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಿಮ್ಮದೇ ಬಿಜೆಪಿ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇತ್ತೀಚೆಗಷ್ಟೇ 28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂಪಾಯಿ ತೆರಿಗೆ ಪಾಲನ್ನು ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ನೀಡಿರುವುದು ಕೇವಲ ರೂ.6,498 ಕೋಟಿ ಮಾತ್ರ. ದೇಶದ ಒಟ್ಟು ತೆರಿಗೆ ಸಂಗ್ರಹಕ್ಕೆ ಕರ್ನಾಟಕ ರೂ.4 ಲಕ್ಷ ಕೋಟಿ ರೂಪಾಯಿಗಳನ್ನು ನೀಡುತ್ತಿದ್ದರೂ ತೆರಿಗೆ ಹಂಚಿಕೆ ರೂಪದಲ್ಲಿ ನಮಗೆ ಸಿಗುತ್ತಿರುವ ಪಾಲು ರೂ.45,000 ಕೋಟಿ ಮಾತ್ರ. ಕರ್ನಾಟಕದ ಜನತೆ, ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ ಪ್ರತಿಯೊಂದು ರೂಪಾಯಿಗೆ ಹಿಂದಿರುಗಿ ಬರುತ್ತಿರುವುದು ಕೇವಲ 15 ಪೈಸೆ ಮಾತ್ರ. ಏಳು ಕೋಟಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತುವ ಧಮ್-ತಾಖತ್ ನಿಮಗಾಗಲಿ, ನಿಮ್ಮ ಹದಿನೇಳು ಎಂಪಿಗಳಿಗಾಗಲಿ ಎಲ್ಲಿದೆ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.