Wednesday, August 19, 2026
Homeಟಾಪ್ ನ್ಯೂಸ್SIDDARAMAIAH: ಮಹಿಳೆಯರ ಸುರಕ್ಷತೆ, ಘನತೆ ಸರ್ಕಾರದ ಮೊದಲ ಆದ್ಯತೆ- ವಿಕೃತ ಕಾಮಿಗಳಿಗೆ ಸಿಎಂ ಸಿದ್ದು ಎಚ್ಚರಿಕೆ

SIDDARAMAIAH: ಮಹಿಳೆಯರ ಸುರಕ್ಷತೆ, ಘನತೆ ಸರ್ಕಾರದ ಮೊದಲ ಆದ್ಯತೆ- ವಿಕೃತ ಕಾಮಿಗಳಿಗೆ ಸಿಎಂ ಸಿದ್ದು ಎಚ್ಚರಿಕೆ

ಬೆಂಗಳೂರು: ಮಹಿಳೆಯರ ಸುರಕ್ಷತೆ, ಘನತೆ ಸರ್ಕಾರದ ಮೊದಲ ಆದ್ಯತೆಯಾಗಿದೆ. ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡುವುದು ಕರ್ನಾಟಕದ ಪರಂಪರೆಯಲ್ಲ. ಇಂತಹ ಕೃತ್ಯ ಎಸಗಿದವರನ್ನು ಬಂಧಿಸುವುದು ಸೇರಿದಂತೆ ಎಲ್ಲಾ ಅಗತ್ಯ ಕಾನೂನು ಕ್ರಮಗಳನ್ನು ಸರ್ಕಾರ ಜರುಗಿಸಿದೆ. ಅಲ್ಲದೇ ಇಂತಹ ಕೃತ್ಯ ಎಸಗುವವರ ಮೇಲೆ ಒಂದು ಕಣ್ಣಿಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವೀಡಿಯೋ ಮಾಡಿ ಬಳಿಕ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದರಿಂದ ಗರಂ ಆಗಿರುವ ಸಿಎಂ ಅವರು ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಳ್ಳುವ ಮೂಲಕ ಕೃತ್ಯ ಎಸಗಿವವರಿಗೆ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಎಕ್ಸ್‌ನಲ್ಲೇನಿದೆ..?: ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುವುದು ಹಾಗೂ ಅವರಿಗೆ ಕಿರುಕುಳ ನೀಡುವುದು, ವೀಡಿಯೋಗಳನ್ನು ಜಾಲತಾಣಗಳಲ್ಲಿ ಶೇರ್‌ ಮಾಡಿ ಅವರ ಮಾನಹಾನಿ ಮಾಡುವುದು ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡುತ್ತದೆ. ಇದು ನಮ್ಮ ಕರ್ನಾಟಕದ ಪರಂಪರೆಯಲ್ಲ.

ಕಳೆದ ಕೆಲವು ದಿನಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿದ್ದು, ತಕ್ಷಣವೇ ಕೃತ್ಯ ಎಸಗಿದವರನ್ನು ಬಂಧಿಸುವುದು ಸೇರಿದಂತೆ ಎಲ್ಲಾ ಅಗತ್ಯ ಕಾನೂನು ಕ್ರಮಗಳನ್ನು ಸರ್ಕಾರ ಜರುಗಿಸಿದೆ. ಇದರ ಜೊತೆಗೆ ನಾವು ಇಂತಹ ಕೃತ್ಯಗಳ ಮೇಲೆ ತೀವ್ರ ನಿಗಾ ವಹಿಸಿದ್ದೇವೆ.

ಮಹಿಳೆಯರು ಕೀಳುದೃಷ್ಟಿಯ ಅಥವಾ ಯಾವುದೇ ತರನಾದ ಕಿರುಕುಳಗಳ ಭಯವಿಲ್ಲದೆ ಧೈರ್ಯವಾಗಿ ನಡೆಯಲಾರದ ಸ್ಥಿತಿಗೆ ನಮ್ಮ ಸಮಾಜ ಹೋಗುತ್ತಿದೆ ಎಂದಾದರೆ, ನಾಗರಿಕರಾಗಿ ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ? ಎಂಬುದನ್ನು ಎಲ್ಲರೂ ತಮ್ಮ ಆತ್ಮಸಾಕ್ಷಿಯನ್ನೊಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ. ಇವು ನಮ್ಮ ಸಾಮಾಜಿಕ ಮೌಲ್ಯಗಳಿಗೆ ವಿರುದ್ಧವಾದವು ಮಾತ್ರವಲ್ಲ, ಕಾನೂನಿನ ರೀತಿಯಲ್ಲಿ ಶಿಕ್ಷಾರ್ಹ ಅಪರಾಧಗಳ ಕೂಡ ಹೌದು.

ನಾಡಿನ ಮಹಿಳೆಯರ ಜೊತೆ ನಮ್ಮ ಸರ್ಕಾರ ದೃಢವಾಗಿ ನಿಂತಿದೆ, ನಿಮ್ಮ ಸುರಕ್ಷೆ ಮತ್ತು ಘನತೆ ನಮ್ಮ ಸರ್ಕಾರದ ಆಧ್ಯತೆಯಾಗಿದೆ. ನಿಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆಗೆ ನಾವು ಬದ್ಧರಿದ್ದೇವೆ ಎಂಬುದನ್ನು ನಾಡಿನ ನನ್ನ ಎಲ್ಲಾ ತಾಯಂದಿರಿಗೆ, ಅಕ್ಕತಂಗಿಯರಿಗೆ ತಿಳಿಸಲು ಬಯಸುತ್ತೇನೆ.

ಯಾರೇ ಆಗಲಿ ಮಹಿಳೆಯರ ಘನತೆಗೆ ಚ್ಯುತಿಯುಂಟು ಮಾಡುವ ವಿಡಿಯೋಗಳು ಅಥವಾ ಖಾತೆಗಳನ್ನು ಆನ್‌ಲೈನ್‌ನಲ್ಲಿ ನೋಡಿದರೆ, ತಕ್ಷಣವೇ ಸೈಬರ್ ಸೆಲ್‌ನ ದೂರವಾಣಿ ಸಂಖ್ಯೆ: 1930 ಗೆ ಕರೆಮಾಡಿ ಅಥವಾ ವೆಬ್‌ಸೈಟ್: http://cybercrime.gov.in ನಲ್ಲಿ ದೂರು ದಾಖಲಿಸಿ.

ನಾವು ನೀವೆಲ್ಲರೂ ಜೊತೆಗೂಡಿ ಪ್ರತಿ ಮಹಿಳೆಯೂ ಸುರಕ್ಷಿತವಾಗಿ, ಗೌರವದಿಂದ ಮತ್ತು ಸ್ವಾತಂತ್ರ್ಯದಿಂದ ಬದುಕುವ ಶ್ರೇಷ್ಠ ಕರ್ನಾಟಕವನ್ನು ನಿರ್ಮಿಸೋಣ ಎಂದು ಸಿಎಂ ಬರೆದುಕೊಂಡಿದ್ದಾರೆ.

CRIME : ಇನ್ಸ್ಟಾಗ್ರಾಮ್‌ನಲ್ಲಿ ಯುವತಿಯರ ಅಶ್ಲೀಲ ಫೋಟೋ ಹಾಕ್ತಿದ್ದ ಯುವಕ ಅರೆಸ್ಟ್..!

ಹೆಚ್ಚಿನ ಸುದ್ದಿ

Change Language »
error: Content is protected !!