Saturday, May 16, 2026
Homeಟಾಪ್ ನ್ಯೂಸ್KARNATAKA POLITICS : ಸಿಎಂ ಆಪ್ತರಿಗಿಲ್ಲ 'ಕಾರ್ಯದರ್ಶಿ' ಭಾಗ್ಯ: ಅಂದು ಗೋವಿಂದರಾಜು, ಇಂದು ನಸೀರ್...

KARNATAKA POLITICS : ಸಿಎಂ ಆಪ್ತರಿಗಿಲ್ಲ ‘ಕಾರ್ಯದರ್ಶಿ’ ಭಾಗ್ಯ: ಅಂದು ಗೋವಿಂದರಾಜು, ಇಂದು ನಸೀರ್ ಅಹ್ಮದ್ ಔಟ್!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅತ್ಯಂತ ಆಪ್ತ ವಲಯದ ಇಬ್ಬರು ಪ್ರಭಾವಿ ನಾಯಕರು (Influential leaders) ಒಂದೇ ಹುದ್ದೆಯಿಂದ ವಿವಾದಾತ್ಮಕವಾಗಿ (Controversy ) ನಿರ್ಗಮಿಸಿರುವುದು ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಚಿವ ಸ್ಥಾನಕ್ಕೆ ಸಮಾನವಾದ ಗೌರವ ಮತ್ತು ಸೌಲಭ್ಯಗಳನ್ನು ಹೊಂದಿರುವ ‘ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ’ ಹುದ್ದೆ ಈಗ ಸತತವಾಗಿ ವಿವಾದದ ಸುಳಿಗೆ ಸಿಲುಕಿದಂತಾಗಿದೆ.

ಆರ್‌ಸಿಬಿ ಸಂಭ್ರಮಕ್ಕೆ ಬಿತ್ತು ಗೋವಿಂದರಾಜು ವಿಕೆಟ್!

ಕಳೆದ ವರ್ಷ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಚಾಂಪಿಯನ್ ಆದಾಗ ಇಡೀ ಬೆಂಗಳೂರು ಸಂಭ್ರಮದಲ್ಲಿತ್ತು. ಆದರೆ ಈ ಸಂಭ್ರಮದ ಆಯೋಜನೆಯಲ್ಲಿ ಉಂಟಾದ ಎಡವಟ್ಟು ಕೆ. ಗೋವಿಂದರಾಜು ಅವರ ಹುದ್ದೆಯನ್ನೇ ಕಸಿದುಕೊಂಡಿತು. ವಿಧಾನಸೌಧದ ಎದುರು ಹಮ್ಮಿಕೊಳ್ಳಲಾಗಿದ್ದ ಅದ್ಧೂರಿ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದ ಘಟನೆಯಲ್ಲಿ 11 ಮಂದಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಪೊಲೀಸರ ಎಚ್ಚರಿಕೆಯನ್ನೂ ಮೀರಿ ಕಾರ್ಯಕ್ರಮಕ್ಕೆ ಒತ್ತಡ ಹೇರಿದ್ದೇ ಈ ದುರಂತಕ್ಕೆ ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ನೈತಿಕ ಹೊಣೆ ಹೊತ್ತು ಗೋವಿಂದರಾಜು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಇದನ್ನೂ ಓದಿ : ಜೆಡಿಎಸ್‌ಗೆ ಜಮೀರ್‌ ಘರ್‌ವಾಪಸಿ ವದಂತಿ, ನಿಖಿಲ್‌ ಕುಮಾರಸ್ವಾಮಿ ಹೇಳಿದ್ದೇನು?

ಜಗಳ: ನಸೀರ್ ಅಹ್ಮದ್ ಸ್ಥಾನಕ್ಕೆ ಕುತ್ತು ತಂದ ದಾವಣಗೆರೆ ‘ಟಿಕೆಟ್’

ಗೋವಿಂದರಾಜು ನಿರ್ಗಮನದ ಬೆನ್ನಲ್ಲೇ ಈಗ ನಸೀರ್ ಅಹ್ಮದ್ ಅವರ ಸರದಿ ಬಂದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರ ಇವರ ಪದಚ್ಯುತಿಗೆ ಮುಖ್ಯ ಕಾರಣವಾಗಿದೆ. ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ಹೈಕಮಾಂಡ್, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಅವರಿಗೆ ಮಣೆ ಹಾಕಿತ್ತು. ಇದರಿಂದ ಅಸಮಾಧಾನಗೊಂಡ ನಸೀರ್ ಅಹ್ಮದ್ ಮತ್ತು ಅವರ ಬೆಂಬಲಿಗರು ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡಲು ಹಿಂದೇಟು ಹಾಕಿದ್ದರು. ಈ ‘ಪಕ್ಷವಿರೋಧಿ’ ಚಟುವಟಿಕೆಯ ಬಗ್ಗೆ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ನೀಡಿದ ದೂರಿನ ಆಧಾರದ ಮೇಲೆ ಹೈಕಮಾಂಡ್ ಸೂಚನೆಯಂತೆ ನಸೀರ್ ಅಹ್ಮದ್ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿದೆ.

ಖಾಲಿಯಾದ ಕುರ್ಚಿಗಳ ಮುಂದಿನ ವಾರಸುದಾರ ಯಾರು?

ಪ್ರಭಾವಿ ಎನಿಸಿಕೊಂಡಿದ್ದ ಇಬ್ಬರೂ ಆಪ್ತರು ಈಗ ಅಧಿಕಾರದಿಂದ ದೂರವಾಗಿದ್ದಾರೆ. ಇದು ಸಿದ್ದರಾಮಯ್ಯ ಅವರ ಆಪ್ತ ವಲಯಕ್ಕೆ ಹಿನ್ನಡೆಯಾಗಿ ಕಂಡರೂ, ಅಸಮಾಧಾನಿತ ಶಾಸಕರನ್ನು ಸಮಾಧಾನಪಡಿಸಲು ಇದೊಂದು ಸುವರ್ಣಾವಕಾಶ ಎಂದು ವಿಶ್ಲೇಷಿಸಲಾಗುತ್ತಿದೆ. ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಹಿರಿಯ ಶಾಸಕರಿಗೆ ಈ ಹುದ್ದೆ ನೀಡಲಾಗುತ್ತದೆಯೇ ಅಥವಾ ಸಿಎಂ ಮತ್ತೆ ತಮ್ಮ ನಂಬಿಕಸ್ತ ನಾಯಕರಿಗೇ ಈ ಪಟ್ಟ ಕಟ್ಟುತ್ತಾರೆಯೇ ಎಂಬುದು ಸದ್ಯದ ಕುತೂಹಲ. ಸಚಿವ ಸಂಪುಟ ಪುನಾರಚನೆಯ ಚರ್ಚೆಗಳ ನಡುವೆಯೇ ಈ ಎರಡು ಹುದ್ದೆಗಳ ಭರ್ತಿ ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!