ಚಿಕ್ಕಮಗಳೂರು – ಕಾರ್ಯಕರ್ತರೇ ನಿಮಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ ಜೆಡಿಎಸ್‌ಗೆ ವಾಪಸ್ ಬಂದು ಬಿಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮನವಿ ಮಾಡಿಕೊಂಡಿದ್ದಾರೆ. ಕಡೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ಯರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದು ನಿಮ್ಮ ಮನೆ. ನೀವು ವಾಪಸ್ ಬನ್ನಿ ಎಂದರು.
ವೈಎಸ್‌ವಿ ದತ್ತ ಅವರ ಹೆಸರು ಉಲ್ಲೇಖಿಸದೆಯೇ ಪರೋಕ್ಷವಾಗಿ ಟಾಂಗ್ ನೀಡಿದ ಇಬ್ರಾಹಿಂ, ಕಡೂರಿನಲ್ಲಿ ಒಬ್ಬರು ಪುಣ್ಯಾತ್ಮ ಇದ್ದರು. ನಾವು ಅವರನ್ನು ಕೊಡೋ ಜಾಗದಲ್ಲಿ ಇಟ್ಟಿದ್ದೆವು. ಅವರೀಗ ಬೇಡೋ ಜಾಗಕ್ಕೆ ಹೋಗಿದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ವೈಎಸ್ ವಿ ದತ್ತಾರ ಹೆಸರೆತ್ತದೆಯೇ ಇಬ್ರಾಹಿಂ ಲೇವಡಿ ಮಾಡಿದರು.
ಇತ್ತ ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ದತ್ತ ಅವರು ದೇವೇಗೌಡರ ಗರಡಿಯಲ್ಲಿ ಪಳಗಿದ ರಾಜಕಾರಣಿ. ಅವರು ವಾಪಸ್ ಬಂದರೆ ಸ್ವಾಗತಿಸುವುದು ಕುಮಾರಸ್ವಾಮಿ ಮತ್ತು ಇಬ್ರಾಹಿಂ ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ