ಪಂಚಮಸಾಲಿ ಮೀಸಲಾತಿ ಜಾರಿಗೊಳಿಸಿದ ಅಧಿಕೃತ ಸರ್ಕಾರಿ ಆದೇಶ ಪತ್ರವನ್ನು ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ, ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ಜಯಮೃತ್ಯುಂಜಯ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು. ಮೀಸಲಾತಿ ಅವಕಾಶ ಕಲ್ಪಿಸಿದ ಸಿಎಂರನ್ನು ಇದೇ ವೇಳೆ ಸ್ವಾಮೀಜಿ ಅಭಿನಂದಿಸಿದರು.
ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಚುನಾವಣೆ ನಂತರ ಒಬಿಸಿ ಮೀಸಲಾತಿಗಾಗಿ ಹೋರಾಟ ಮುಂದುವರೆಸಲಾಗುವುದು ಎಂದು ನುಡಿದ ಜಯಮೃತ್ಯುಂಜಯ ಸ್ವಾಮೀಜಿ, ನಾವು ಕೇಳಿದ್ದು ಶೇ 15 ರಷ್ಟು 2ಎ ಮೀಸಲಾತಿ, ಆದರೆ ಸರ್ಕಾರ ಶೇ 7ರಷ್ಟು 2ಡಿ ಮೀಸಲಾತಿ ನೀಡಿದೆ. ಇದು ನಮ್ಮ ಐತಿಹಾಸಿಕ ಹೋರಾಟಕ್ಕೆ ಸಂದ ಪ್ರಥಮ ಜಯವಾಗಿದೆ ಎಂದರು.
ಮೀಸಲಾತಿ ಹೋರಾಟಕ್ಕೆ ಸ್ಪಂದಿಸಿದ ಪ್ರತಿಯೊಬ್ಬರೂ ಇಂದು ಮನೆಮನೆಯಲ್ಲಿ ಸಂಭ್ರಮಾಚರಣೆ ನಡೆಸಿ ಎಂದು ಸ್ವಾಮೀಜಿ ಸಮುದಾಯದ ಜನರಿಗೆ ಕರೆ ನೀಡಿದರು. ಶಾಸಕ ಸಿದ್ದು ಸವದಿ, ಮಾಜಿ ಸಚಿವ ಶಶಿಕಾಂತ್ ನಾಯಕ, ಪಂಚಸೇನಾ ಅಧ್ಯಕ್ಷ ಡಾ. ಬಿಎಸ್ ಪಾಟೀಲ್ ನಾಗರಾಳ್ ಹುಲಿ ಮುಂತಾದವರು ಹಾಜರಿದ್ದರು.