ಬೆಂಗಳೂರು: “ನಮ್ಮ ಸರ್ಕಾರದ ಮೂಲ ಉದ್ದೇಶವೇ ಜನರ ಧ್ವನಿಗೆ ಗೌರವ ನೀಡುವುದು. ಬೆಂಗಳೂರು (Bengaluru) ಮಹಾನಗರವು ಕೇವಲ ಆಡಳಿತ ಕೇಂದ್ರವಾಗಿಯಷ್ಟೇ ಉಳಿಯದೆ, ಇಡೀ ಭಾರತದ ಹೃದಯ ಭಾಗವಾಗಿ ಬೆಳೆಯಬೇಕು,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Cm Dk Shivakumar) ತಿಳಿಸಿದ್ದಾರೆ.
ಕಷ್ಟಪಟ್ಟು ಮನೆ ಖರೀದಿಸಿದ ನಾಗರಿಕರ ಸಂಕಷ್ಟಗಳು ನಮಗೆ ತಿಳಿದಿದ್ದು, ಪ್ರತಿಯೊಬ್ಬ ಆಸ್ತಿ ಮಾಲೀಕನಿಗೂ ತನ್ನ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಸಿಗುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಭರವಸೆ ನೀಡಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಲಾಗಿದ್ದ ‘ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2026’ ಕುರಿತಾದ ಸಂವಾದದಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳ ಒಕ್ಕೂಟದ ಪ್ರತಿನಿಧಿಗಳನ್ನು ಉದ್ದೇಶಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
ಮಧ್ಯಮ ವರ್ಗದ ಜನರು ತಲೆಯ ಮೇಲೊಂದು ಸೂರು ಪಡೆದುಕೊಳ್ಳಲು ಪಡುವ ಪಾಡು ಸುಲಭದ್ದಲ್ಲ. ಆಸ್ತಿ ಖರೀದಿ ಒಪ್ಪಂದ, ನೋಂದಣಿ ಹಾಗೂ ತದನಂತರ ಬಿಲ್ಡರ್‌ಗಳಿಂದ ಎದುರಾಗುವ ಕಾನೂನು ಗೊಂದಲಗಳ ಬಗ್ಗೆ ತಮಗೆ ಸಂಪೂರ್ಣ ಅರಿವಿದೆ. ಹೊಸ ವಿಧೇಯಕದ ಬಗ್ಗೆ ನಾಗರಿಕರು ತಮ್ಮ ಅನಿಸಿಕೆ ಹಾಗೂ ಸಲಹೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಆಗಸ್ಟ್ 6 ರವರೆಗೆ ಕಾಲಾವಕಾಶವಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಬರೆದು ತಿಳಿಸಬಹುದು ಎಂದು ಸಿಎಂ ಕೋರಿದ್ದಾರೆ.
ಡಿಜಿಟಲ್ ಕ್ರಾಂತಿ ಮತ್ತು ಮನೆ ಬಾಗಿಲಿಗೆ ಇ-ಖಾತಾ:
ಆಸ್ತಿ ಹಕ್ಕುಗಳ ರಕ್ಷಣೆಗೆ ಸರ್ಕಾರ ತಂದಿರುವ ಇ-ಖಾತಾ ವ್ಯವಸ್ಥೆಯು ಕಂದಾಯ ವಲಯದಲ್ಲಿ ದೊಡ್ಡ ಕ್ರಾಂತಿಯನ್ನುಂಟು ಮಾಡಿದೆ. ಈಗಾಗಲೇ ಬೆಂಗಳೂರಿನ 40 ಲಕ್ಷ ಆಸ್ತಿಗಳ ಪೈಕಿ 26 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಇ-ಖಾತಾ ವಿತರಿಸಲಾಗಿದ್ದು, ಇಂತಹ ವಿನೂತನ ಡಿಜಿಟಲ್ ವ್ಯವಸ್ಥೆ ಇಡೀ ದೇಶದಲ್ಲೇ ಪ್ರಪ್ರಥಮವಾಗಿದೆ ಎಂದು ಸಿಎಂ ಎಂದರು.
ಆಡಳಿತವನ್ನು ಸರಳಗೊಳಿಸುವ ಸಲುವಾಗಿ (ಈಸ್ ಆಫ್ ಬಿಸಿನೆಸ್) ರಾಜಧಾನಿಯಲ್ಲಿ ಐದು ಪ್ರತ್ಯೇಕ ಕಾರ್ಪೊರೇಷನ್‌ಗಳನ್ನು ರಚಿಸಲಾಗುತ್ತಿದ್ದು, ಅಧಿಕಾರ ವಿಕೇಂದ್ರೀಕರಣದ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳ ಬಿಕ್ಕಟ್ಟುಗಳನ್ನು ಕೋರ್ಟ್ ಮೆಟ್ಟಿಲೇರದೆ ಸಾಮರಸ್ಯದಿಂದ ಬಗೆಹರಿಸಲು ಒತ್ತು ನೀಡಲಾಗುತ್ತಿದೆ. ಸರ್ಕಾರದ 6ನೇ ಗ್ಯಾರಂಟಿಯಾದ ‘ಭೂ ಗ್ಯಾರಂಟಿ’ಗೂ ಜನರಿಂದ ನಿರೀಕ್ಷೆಗೂ ಮೀರಿದ ಬೆಂಬಲ ಸಿಗುತ್ತಿದೆ ಎಂದು ತಿಳಿಸಿದರು.
ಜಾಗತಿಕ ಹೂಡಿಕೆ ಹಾಗೂ ಮೂಲಸೌಕರ್ಯದ ಮೇಕ್ ಓವರ್:
ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಘಟಕಗಳ ನಿರ್ವಹಣೆ, ಕಾವೇರಿ 5ನೇ ಹಂತದ ಕುಡಿಯುವ ನೀರು ಪೂರೈಕೆ ಹಾಗೂ ಮಳೆ ನೀರು ಕೊಯ್ಲು (ರೈನ್ ವಾಟರ್ ಹಾರ್ವೆಸ್ಟಿಂಗ್) ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಇಲಾಖೆ ತೀವ್ರ ಗಮನ ಹರಿಸಿದೆ. ಮನೆ ಕೊಂಡವರಿಗೆ ದಾಖಲೆಗಳನ್ನು ವರ್ಗಾಯಿಸಲು ವಿಳಂಬ ಮಾಡುವ ಡೆವಲಪರ್‌ಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು.
ನಗರದ ವಾಹನ ದಟ್ಟಣೆ ನಿಯಂತ್ರಣಕ್ಕೆ 132 ಕಿಲೋಮೀಟರ್ ಉದ್ದದ ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’ (ಪೆರಿಫೆರಲ್ ವರ್ತುಲ ರಸ್ತೆ) ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಇದಕ್ಕಾಗಿ ಭೂಮಿ ನೀಡಿದ ರೈತರಿಗೆ ದೇಶದಲ್ಲೇ ಅತ್ಯಧಿಕ ಪರಿಹಾರ ವಿತರಿಸಲಾಗುತ್ತಿದೆ. ರಸ್ತೆ ಗುಂಡಿಗಳ ದುರಸ್ತಿಗಾಗಿಯೇ 4,000 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಬಡವರೂ ಸಹ ಸ್ವಂತ ಮನೆ ಹೊಂದುವ ಕನಸಿಗೆ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ದಾಖಲೆಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ತಮ್ಮ ದಾವೋಸ್ ಪ್ರವಾಸದ ದಿನಗಳನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಮುಂಬೈನಂತಹ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಆಸ್ತಿಗಳ ಬೆಲೆ ಕೈಗೆಟುಕುವ ದರದಲ್ಲಿದೆ. ಇದೇ ಕಾರಣಕ್ಕೆ ಜಾಗತಿಕ ಹೂಡಿಕೆದಾರರು ಮುಂಬೈ ಬಿಟ್ಟು ನಮ್ಮ ಸಿಲಿಕಾನ್ ಸಿಟಿಯತ್ತ ಮುಖ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಗರಕ್ಕೆ ಎರಡನೇ ವಿಮಾನ ನಿಲ್ದಾಣದ ಅಗತ್ಯವಿದ್ದು, ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ.
ಇದು ಬೆಂಗಳೂರನ್ನು ಹೂಡಿಕೆಯ ಜಾಗತಿಕ ಹಬ್ ಆಗಿ ಪರಿವರ್ತಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂವಾದದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಕೆ.ಜೆ. ಜಾರ್ಜ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಅಪಾರ್ಟ್‌ಮೆಂಟ್ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಜೀವ್ ಗೌಡ ಉಪಸ್ಥಿತರಿದ್ದರು.
