ಕಲಬುರಗಿಯ ಗೋರ್ಟಾ (ಬಿ) ಗ್ರಾಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ವೇಳೆ ಜೊತೆಗಿದ್ದರು.
ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಮೀಸಲಾತಿ ನಿರ್ಣಯ ಜೇನುಗೂಡಿಗೆ ಕೈಹಾಕುವ ಕೆಲಸ. ಜೇನ್ನೊಣಗಳಿಂದ ಕಚ್ಚಿಸಿಕೊಂಡರೂ ಜೇನಿನ ಸಿಹಿ ಹಂಚಿದ ತೃಪ್ತಿ ತನಗಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಮುಸ್ಲಿಮ್ ಸಮುದಾಯಕ್ಕೆ ನೀಡಿದ್ದ ಓಬಿಸಿಯನ್ನು ಇಡಬ್ಲ್ಯುಎಸ್ ಪರಿಚ್ಛೇದಕ್ಕೆ ಪರಿವರ್ತಿಸಿರುವುದರ ಬಗ್ಗೆ ಸಮಜಾಯಿಷಿ ನೀಡಿದ ಸಿಎಂ ಬೊಮ್ಮಾಯಿ, ಈ ಮುನ್ನ ಶೇ4 ರಷ್ಟಿದ್ದ ಮೀಸಲಾತಿಯನ್ನು ತೆಗೆದು ಶೇ 10ರಷ್ಟು ಮೀಸಲಾತಿ ಇರುವ ಸ್ಥಾನಕ್ಕೆ ಬದಲಿಸಿದ್ದೇವೆ. ಇದು ಅನ್ಯಾಯ ಹೇಗೆ ಎಂದು ಪ್ರಶ್ನಿಸಿದರು.
ಚುನಾವಣಾ ದಿನಾಂಕ ಘೋಷಣೆ ಬಳಿಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಬಸವರಾಜ್ ಬೊಮ್ಮಾಯಿ ಇದೇ ವೇಳೆ ಘೋಷಿಸಿದ್ದಾರೆ.