ರಾಜ್ಯದ ನೂತನ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ವರ್ಚುಯಲ್ ಆಗಿ ಉದ್ಘಾಟಿಸಿದ್ದಾರೆ. ಚಾಮರಾಜನಗರ, ಹಾಸನ, ಕೊಡಗು, ಹಾವೇರಿ, ಕೊಪ್ಪಳ, ಬಾಗಲಕೋಟೆ, ಬೀದರ್ ವಿವಿಗಳು ಮತ್ತು ಮಂಡ್ಯ –ರಾಯಚೂರು ಜಿಲ್ಲೆಯಲ್ಲಿ ಸಂಯೋಜಿತ ವಿವಿ ಇಂದಿನಿಂದ ಕಾರ್ಯನಿರ್ವಹಿಸಲಿವೆ. ಇದೇ ವೇಳೆ ಏಳು ಸರಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಕರ್ನಾಟಕ ಇನ್ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿಗೂ (ಕೆಐಟಿ) ಸಹ ಚಾಲನೆ ದೊರಕಿದೆ.
ಕಳೆದೆರೆಡು ಬಜೆಟ್‍ನಲ್ಲಿ ರಾಜ್ಯ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ಜಿಲ್ಲೆಗೊಂದು ವಿವಿ ನಿರ್ಮಿಸಲಾಗಿದೆ ಎಂದು ನುಡಿದ ಸಿಎಂ ಬೊಮ್ಮಾಯಿ, ಉನ್ನತ ಶಿಕ್ಷಣದ ಬಲವರ್ಧನೆಗಾಗಿ ಕೆಐಟಿಗಳು ಜಾಗತಿಕ ಮಟ್ಟದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೊಡನೆ ಒಡಂಬಡಿಕೆ ಮಾಡಿಕೊಳ್ಳಲಿವೆ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ್ ನಿರಾಣಿ, ಸಚಿವ ಅಶ್ವತ್ಥ್ ನಾರಾಯಣ್ ಸೇರಿದಂತೆ ಹಲವರು ಹಾಜರಿದ್ದರು. ಎಲ್ಲಾ ವಿವಿ ಕುಲಪತಿಗಳು ತಮ್ಮ ಸ್ಥಳದಿಂದಲೇ ವರ್ಚುಯಲ್ ಮೂಲಕ ಪಾಲ್ಗೊಂಡಿದ್ದು ವಿಶೇಷವಾಗಿತ್ತು.