ತುಮಕೂರು : ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದು (Accident) ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಬೆಳ್ಳಾವಿ ಕ್ರಾಸ್ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. ಕ್ರೂಸರ್ ಬೆಂಗಳೂರು ಕಡೆಯಿಂದ ಕೊಪ್ಪಳಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಸಾಕ್ಷಿ (7̧) ಮಾರುತಪ್ಪ (45), ವೆಂಕಟೇಶ (30), ಗವಿಸಿದ್ದಪ್ಪ (28) ಮೃತ ದುರ್ದೈವಿಗಳು. ಮೃತರೆಲ್ಲರೂ ಕೊಪ್ಪಳದ ಕುಕ್ಕನೂರು ನಿವಾಸಿಗಳೆಂದು ತಿಳಿದುಬಂದಿದೆ. ಶ್ರೀನಿವಾಸ, ಪ್ರವೀಣ್ ಕುಮಾರ್, ರಾಜಪ್ಪ, ಹುಲಿಗೆಪ್ಪ, ರಾಕೇಶ್, ತಿರುಪತಿ, ಶ್ರೀನಿವಾಸ್ ಗಾಯಗೊಂಡವರಾಗಿದ್ದಾರೆ.
ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್ ನಲ್ಲಿದ್ದಂತಹ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರು ಕೊಪ್ಪಳ ಮೂಲದವರು ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ.
ಮೃತ ದೇಹಗಳನ್ನ ತುಮಕೂರಿನ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದ್ದು, ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.