ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ (Chinnaswamy stadium stampede Case) ಕಾಲ್ತುಳಿತ ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕ್ಲೀನ್ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ (R Ashok), ಅಧಿಕಾರಿಗಳು ನಿರಪರಾಧಿಗಳಾದರೆ ಅಪರಾಧಿಗಳು ಯಾರು? ಈ ಸಾವಿಗೆ ನ್ಯಾಯ ಎಲ್ಲಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಸಂಭವಿಸಿ ದಿನಗಳು ಕಳೆದು ಹೋಗಿವೆ. ನಾವು ವಿಧಾನಸಭೆಯಲ್ಲಿ ಕೂಡ ಇದಕ್ಕೆ ಸರ್ಕಾರವೇ ನೇರ ಕಾರಣ ಎಂದು ಹೇಳಿದ್ದೇವೆ. ಈಗ ವರದಿಯಲ್ಲೇ ಎಲ್ಲ ಕ್ಲೀನ್ ಚಿಟ್‌ಗಳನ್ನು ಕೊಟ್ಟು ಬಿಟ್ಟಿದ್ದಾರೆ. ಅವತ್ತು ಕಮಿಷನರ್, ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ರಿ..ಆದರೆ ಸಸ್ಪೆಂಡ್ ಆಗಬೇಕಿದ್ದವರು ಯಾರು? ಅಂದು ವೇದಿಕೆ ಮೇಲೆ ಪತ್ನಿ, ಮಕ್ಕಳ ಜತೆ ಸ್ಟೇಜ್ ಮೇಲೆ ಇದ್ದವರ ಮೇಲೆ ಕ್ರಮ ಆಗಬೇಕಿತ್ತು. ಅವರ ಮೇಲೆ ಯಾವುದೇ ಕೇಸ್ ಆಗಲಿಲ್ಲ. ಅಧಿಕಾರಿಗಳ ಮೇಲೆ ಕೇಸ್ ಮಾಡಿದ್ದೀರ. ಅಧಿಕಾರಿಗಳು ಈಗ ನಿರಪರಾಧಿಗಳು ಆದರೆ, ಅಪರಾಧಿಗಳು ಯಾರು? ಸಾವಿಗೆ ನ್ಯಾಯ ಎಲ್ಲಿದೆ ಆದರೆ 11 ಜನರ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಅವರು ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ. ಮುಂದೆ ನಮ್ಮ ಸರ್ಕಾರ ಬಂದ್ರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುತ್ತೇವೆ. ಯಾರು ಯಾರು ಭಾಗಿಯಾಗಿದ್ದರು? ಪ್ರೋಟೋಕಾಲ್ ಇಲ್ಲದೆ ಯಾರು ವೇದಿಕೆ ಮೇಲೆ ಬಂದಿದ್ದರು ಎನ್ನುವ ಕುರಿತಾಗಿ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ.