Thursday, April 16, 2026
Homeಕ್ರೀಡೆKACA : ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೊಸ ಕಳೆ: ಆಸನ ಸಾಮರ್ಥ್ಯ 20 ಸಾವಿರ ಹೆಚ್ಚಳಕ್ಕೆ ಕೆಎಸ್‌ಸಿಎ...

KACA : ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೊಸ ಕಳೆ: ಆಸನ ಸಾಮರ್ಥ್ಯ 20 ಸಾವಿರ ಹೆಚ್ಚಳಕ್ಕೆ ಕೆಎಸ್‌ಸಿಎ ಮಾಸ್ಟರ್ ಪ್ಲಾನ್

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stadium) ನವೀಕರಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (KSCA) ಈಗ ಅಧಿಕೃತವಾಗಿ ಚಾಲನೆ ನೀಡಿದೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದ ಭೀಕರ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಕಹಿ ಘಟನೆಯ ನಂತರ ಕ್ರೀಡಾಂಗಣದ ವಿಸ್ತರಣೆ ಮತ್ತು ಸುರಕ್ಷತೆಯ ಬಗ್ಗೆ ಅಭಿಮಾನಿಗಳಿಂದ ತೀವ್ರ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಈಗ ಸ್ಟೇಡಿಯಂ ಅನ್ನು ಆಧುನೀಕರಿಸಲು ಮುಂದಾಗಿದೆ.

ಪ್ರಸ್ತುತ ಸುಮಾರು 34,000 ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಹೊಂದಿರುವ ಈ ಕ್ರೀಡಾಂಗಣಕ್ಕೆ ಹೆಚ್ಚುವರಿಯಾಗಿ 20,000 ಆಸನಗಳನ್ನು ಸೇರಿಸುವ ಮಹತ್ವಾಕಾಂಕ್ಷೆಯ ಪ್ರಸ್ತಾವನೆಯನ್ನು ಕೆಎಸ್‌ಸಿಎ ಸಿದ್ಧಪಡಿಸಿದೆ. ನವೀಕರಣ ಕಾರ್ಯ ಪೂರ್ಣಗೊಂಡರೆ ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯ 54,000ಕ್ಕೆ ಏರಿಕೆಯಾಗಲಿದೆ. ಈ ಬೃಹತ್ ಯೋಜನೆಯ ಮೊದಲ ಹಂತವಾಗಿ ಕೆಎಸ್‌ಸಿಎ ಈಗಾಗಲೇ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿದೆ.

ಈ ಮಹತ್ವದ ಯೋಜನೆಯ ಬಗ್ಗೆ ಮಾಹಿತಿ ನೀಡಿರುವ ಕೆಎಸ್‌ಸಿಎ ಪ್ರಮುಖರಾದ ವೆಂಕಟೇಶ್ ಪ್ರಸಾದ್ ಅವರು, ಕ್ರೀಡಾಂಗಣದ ನವೀಕರಣವು ಒಂದು ಸುದೀರ್ಘ ಪ್ರಕ್ರಿಯೆಯಾಗಿದ್ದು ಇದಕ್ಕೆ ಹಲವು ಸುತ್ತಿನ ಸಭೆಗಳು ಮತ್ತು ಅನುಮೋದನೆಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ. ನವೀಕರಣ ಕಾರ್ಯ ಪೂರ್ಣಗೊಳಿಸಲು ಸದ್ಯಕ್ಕೆ ಯಾವುದೇ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸದಿದ್ದರೂ, ತಮ್ಮ ಅಧಿಕಾರಾವಧಿಯಲ್ಲೇ ಈ ಕಾರ್ಯವನ್ನು ಮುಗಿಸುವ ಗುರಿ ಹೊಂದಿರುವುದಾಗಿ ಅವರು ಹೇಳಿದ್ದಾರೆ.

ಇತ್ತೀಚೆಗೆ ವೆಂಕಟೇಶ್ ಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ನವೀಕರಣ ಯೋಜನೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದೆ. ಈ ಯೋಜನೆಯು ಕೇವಲ ಆಸನಗಳ ಸಂಖ್ಯೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕ್ರೀಡಾಂಗಣದ ಸಂಪೂರ್ಣ ಮರುವಿನ್ಯಾಸವನ್ನೂ ಒಳಗೊಂಡಿದೆ. ಪ್ರೇಕ್ಷಕರಿಗೆ ಸುಧಾರಿತ ಸೌಲಭ್ಯಗಳನ್ನು ಒದಗಿಸುವುದು, ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ಮತ್ತು ಮುಖ್ಯವಾಗಿ ಜನದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!