Wednesday, February 19, 2025
Homeಟಾಪ್ ನ್ಯೂಸ್ಅರುಣಾಚಲದ 11 ಸ್ಥಳಗಳಿಗೆ ಚೀನಾ ಮರುನಾಮಕರಣ

ಅರುಣಾಚಲದ 11 ಸ್ಥಳಗಳಿಗೆ ಚೀನಾ ಮರುನಾಮಕರಣ

ಬೀಜಿಂಗ್: ಭಾರತದ ವಿರುದ್ಧ ಚೀನಾ ಮತ್ತೆ ಕಾಲುಕೆರೆದು ನಿಂತಿದ್ದು, ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿದೆ. ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಮೂರನೇ ಹಂತದ ಹೆಸರುಗಳನ್ನು ಬಿಡುಗಡೆ ಮಾಡಿದೆ.

ಅರುಣಾಚಲ ಪ್ರದೇಶದ ಕೆಲವು ಭಾಗಗಳು ದಕ್ಷಿಣ ಟಿಬೆಟ್‌ನಲ್ಲಿವೆ ಎಂದು ಪ್ರತಿಪಾದಿಸಿ ಈ 11 ಸ್ಥಳಗಳೊಂದಿಗೆ ಚೀನಾ ನಕ್ಷೆಯನ್ನು ಬಿಡುಗಡೆ ಮಾಡಿದೆ. ಇದನ್ನು ಚೀನಾ, ಝಂಗ್ನಾನ್ ಪ್ರದೇಶ ಎಂದು ಉಲ್ಲೇಖಿಸಿದೆ. ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರಕ್ಕೆ ಸಮೀಪವಿರುವ ಪಟ್ಟಣವನ್ನು ಸಹ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೆಸರಿಸಲಾದ 11 ಸ್ಥಳಗಳಲ್ಲಿ ಐದು ಪರ್ವತ ಶಿಖರಗಳು, ಎರಡು ವಸತಿ ಪ್ರದೇಶಗಳು, ಎರಡು ಭೂ ಪ್ರದೇಶಗಳು ಮತ್ತು ಎರಡು ನದಿಗಳು ಸೇರಿವೆ. ಚೀನಾ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ಯತ್ನಿಸಿರುವ ಈ ಭೌಗೋಳಿಕ ಪ್ರದೇಶವನ್ನು ಮೊದಲಿನಿಂದಲೂ ಭಾರತ ನಿಯಂತ್ರಿಸುತ್ತಿದೆ ಮತ್ತು ನಿರ್ವಹಿಸುತ್ತಿದೆ.

2017ರಲ್ಲಿ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಇದೇ ರೀತಿಯ ಆರು ಸ್ಥಳಗಳ ಪಟ್ಟಿಯನ್ನು ಹೊರತಂದಿತ್ತು. 2021ರಲ್ಲಿ ಮರುಹೆಸರಿಸಿದ 15 ಸ್ಥಳಗಳ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡಿತ್ತು. ಭೌಗೋಳಿಕ ಹೆಸರುಗಳ ನಿರ್ವಹಣೆಯ ರಾಜ್ಯ ಕೌನ್ಸಿಲ್‌ನ ಸಂಬಂಧಿತ ನಿಬಂಧನೆಗಳ ಪ್ರಕಾರ, [ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ] ಸಂಬಂಧಿತ ಇಲಾಖೆಗಳೊಂದಿಗೆ ಸೇರಿ ದಕ್ಷಿಣ ಟಿಬೆಟ್‌ನ ಕೆಲವು ಭೌಗೋಳಿಕ ಹೆಸರುಗಳನ್ನು ಪ್ರಮಾಣೀಕರಿಸಲಾಗಿದೆ. ದಕ್ಷಿಣ ಟಿಬೆಟ್‌ನಲ್ಲಿ (ಒಟ್ಟು 11) ಸಾರ್ವಜನಿಕ ಬಳಕೆಗಾಗಿ ಪೂರಕವಾಗಿ ಸ್ಥಳನಾಮಗಳ ಮೂರನೇ ಪಟ್ಟಿಯನ್ನು ಈಗ ಅಧಿಕೃತವಾಗಿ ಘೋಷಿಸಲಾಗಿದೆ ಎಂದು ಹೇಳಲಾಗಿದೆ.

ಅರುಣಾಚಲ ಪ್ರದೇಶವು ಎಂದಿಗೂ ಮತ್ತು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ. ಅರುಣಾಚಲ ಪ್ರದೇಶದ ಸ್ಥಳಗಳಿಗೆ ಹೊಸ ಹೆಸರುಗಳನ್ನು ನೀಡುವುದರಿಂದ ಈ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ 2021 ರಲ್ಲಿ ಹೇಳಿದ್ದರು.

ಹೆಚ್ಚಿನ ಸುದ್ದಿ

error: Content is protected !!