ಬೀಜಿಂಗ್: ಮಧ್ಯ ಚೀನಾದ ಹುನಾನ್ ಪ್ರಾಂತ್ಯದಲ್ಲಿ ಬೃಹತ್ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಈ ಮೂಲಕ ಚೀನಾ ವಿಶ್ವದ ಅತಿ ದೊಡ್ಡ ಚಿನ್ನದ ನಿಕ್ಷೇಪ ಎನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ಸೌತ್ ಡೀಪ್ ಮೈನ್ ಅನ್ನು ಹಿಂದಿಕ್ಕಿದೆ.
ಹೌದು, ಚೀನಾದಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದು 1,000 ಮೆಟ್ರಿಕ್ ಟನ್‌ಗಳಷ್ಟು ಉತ್ತಮ ಗುಣಮಟ್ಟದ ಅದಿರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಪ್ರಾಂತ್ಯದ ಈಶಾನ್ಯ ಪ್ರದೇಶದ ಪಿಂಗ್ಜಿಯಾಂಗ್ ಕೌಂಟಿಯಲ್ಲಿ ಭೂವೈಜ್ಞಾನಿಕ ಬ್ಯೂರೋ ಈ ಆವಿಷ್ಕಾರವನ್ನು ದೃಢಪಡಿಸಿದೆ.
ಚೈನೀಸ್ ಸ್ಟೇಟ್ ಮೀಡಿಯಾದ ವರದಿಯ ಪ್ರಕಾರ, ಇದು ಸರಿಸುಮಾರು 600 ಬಿಲಿಯನ್ ಯುವಾನ್ (ಸುಮಾರು 6,91,473 ಕೋಟಿ ರೂ.) ಮೌಲ್ಯದ್ದಾಗಿದೆ. ಈ ನಿಕ್ಷೇಪ ಜಾಗತಿಕವಾಗಿ ಅತಿದೊಡ್ಡ ಚಿನ್ನದ ಮೀಸಲು ಆಗಿರಬಹುದು ಎಂದು ಅಂದಾಜಿಸಲಾಗಿದ್ದು, ಇದು 930 ಮೆಟ್ರಿಕ್ ಟನ್‌ಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾದ ಸೌತ್ ಡೀಪ್ ಮೈನ್ ಅನ್ನು ಮೀರಿಸುತ್ತದೆ.
ಪ್ರಾಥಮಿಕ ಪರಿಶೋಧನೆಯಲ್ಲಿ 2 ಕಿ.ಮೀ ಆಳದಲ್ಲಿ 40 ಚಿನ್ನದ ನಾಳಗಳನ್ನು ಪತ್ತೆಹಚ್ಚಲಾಯಿತು. ಅದು ಅಂದಾಜು 300 ಮೆಟ್ರಿಕ್ ಟನ್ ಚಿನ್ನವನ್ನು ಒಳಗೊಂಡಿತ್ತು. ಸುಧಾರಿತ 3D ಮಾಡೆಲಿಂಗ್ ಹೆಚ್ಚಿನ ಆಳದಲ್ಲಿ ಇನ್ನಷು ಮೀಸಲು ಸಾಧ್ಯತೆಯನ್ನು ಸೂಚಿಸಿದೆ. ಇದು 3 ಕಿ.ಮೀ ತಲುಪುವ ಸಂಭಾವ್ಯವಿದೆ. ಈ ಸಂಶೋಧನೆಯು ಚೀನಾದ ಚಿನ್ನದ ಉದ್ಯಮ ಮತ್ತು ಆರ್ಥಿಕ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.