ಜಾರ್ಖಂಡ್: ಮೇಘಾಲಯ(Meghalaya) ಜಾರ್ಖಂಡ್ ಮತ್ತು ಮಹಾರಾಷ್ಟ್ರದ(Jharkhand and Maharashtra) ಹಲವು ಹಳ್ಳಿಗಳಲ್ಲಿ ಇಂದಿಗೂ ಮಕ್ಕಳು ಶಾಲೆಗೆ(School) ತಲುಪಲು ಪ್ರತಿದಿನ ಹತ್ತಾರು ಕಿಲೋಮೀಟರ್ ಹಳ್ಳತಿಟ್ಟುಗಳ ಹಾದಿಯಲ್ಲಿ ನಡೆಯಬೇಕಾದ ಅನಿವಾರ್ಯತೆ ಇದೆ. ಕೇವಲ ಹಾಳಾದ ರಸ್ತೆಗಳಷ್ಟೇ ಅಲ್ಲದೆ, ತುಂಬಿ ಹರಿಯುವ ನದಿಗಳು ಮತ್ತು ಹಳ್ಳಗಳನ್ನು ಜೀವದ ಹಂಗು ತೊರೆದು ದಾಟಬೇಕಾದ ಪರಿಸ್ಥಿತಿ ಇಲ್ಲಿನ ವಿದ್ಯಾರ್ಥಿಗಳದ್ದಾಗಿದೆ. ಕನಿಷ್ಠ ಸೌಕರ್ಯಗಳೂ ಇಲ್ಲದೆ, ಕೇವಲ ಶಾಲೆಗೆ ಹೋಗಲು ಮಕ್ಕಳು ಪಡುತ್ತಿರುವ ಈ ದುಸ್ಥಿತಿಯು ಸರ್ಕಾರದ ‘ಅಭಿವೃದ್ಧಿ’ಯ ವಾದಗಳನ್ನು ಅಣಕಿಸುವಂತಿದೆ.
ಒಂದೆಡೆ ಕೇಂದ್ರ ಸರ್ಕಾರ ‘ಡಿಜಿಟಲ್ ಇಂಡಿಯಾ’ ಮತ್ತು ‘ವಿಕಸಿತ ಭಾರತ’ದ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದರೆ, ಇನ್ನೊಂದೆಡೆ ದೇಶದ ಹಲವು ರಾಜ್ಯಗಳ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳ ಮೂಲಸೌಕರ್ಯದ ಪರಿಸ್ಥಿತಿ ಮಾತ್ರ ಅತ್ಯಂತ ದಾರುಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ದೇಶದ ಡಿಜಿಟಲ್ ಕ್ರಾಂತಿಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿರುವ ಬೆನ್ನಲ್ಲೇ, ದೇಶದ ಗ್ರಾಮೀಣ ಭಾಗದ ಮಕ್ಕಳು ಅಕ್ಷರ ಕಲಿಯಲು ಪಡುತ್ತಿರುವ ಕಷ್ಟಗಳು ಈ ಘೋಷಣೆಗಳು ಕೇವಲ ಕಾಗದದ ಮೇಲಷ್ಟೇ ಇವೆಯೇ ಎಂಬ ಅನುಮಾನವನ್ನು ಹುಟ್ಟಿಸುತ್ತಿವೆ.
ಇದು ವಿಕಸಿತ ಭಾರತವಲ್ಲ, ವ್ಯವಸ್ಥೆಯ ಕ್ರೂರ ನಿರ್ಲಕ್ಷ್ಯ!
ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರಿಗೂ ಆನ್‌ಲೈನ್ ಶಿಕ್ಷಣ ಮತ್ತು ತಂತ್ರಜ್ಞಾನ ಸಿಗುತ್ತಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದ್ದರೂ, ಕನಿಷ್ಠ ಶಾಲೆಗೆ ಹೋಗಲು ಸುಸಜ್ಜಿತ ರಸ್ತೆ ಅಥವಾ ಸೇತುವೆ ಇಲ್ಲದಿರುವುದು ಆಡಳಿತ ವ್ಯವಸ್ಥೆಯ ಕ್ರೂರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇದು ನಿಜವಾದ ‘ವಿಕಸಿತ ಭಾರತ’ವಲ್ಲ, ಬದಲಿಗೆ ಗ್ರಾಮೀಣ ಭಾರತದ ಭವಿಷ್ಯವನ್ನು ಕತ್ತಲಿಗೆ ತಳ್ಳುತ್ತಿರುವ ನಿರ್ಲಕ್ಷ್ಯದ ಪರಾಕಾಷ್ಠೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಕ್ಕಳ ಹಿತದೃಷ್ಟಿಯಿಂದಲಾದರೂ ಸರ್ಕಾರ ಕೇವಲ ದೊಡ್ಡ ದೊಡ್ಡ ಪ್ರಚಾರಗಳಿಗೆ ಸೀಮಿತವಾಗದೆ, ತಳಮಟ್ಟದಲ್ಲಿ ಶಾಲೆ ಹಾಗೂ ರಸ್ತೆಗಳ ಅಭಿವೃದ್ಧಿಗೆ ತಕ್ಷಣವೇ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಇದನ್ನೂ ಓದಿ: ಮಹಾತ್ಮ ಗಾಂಧಿ ಹತ್ಯೆ ತನಿಖೆ ವಿಳಂಬ ಪ್ರಶ್ನಿಸಿದ್ದ ಅರ್ಜಿ ವಜಾ – ಹೈಕೋರ್ಟ್‌ನಿಂದ 10 ಸಾವಿರ ರೂ. ದಂಡ