ಚಿಕ್ಕಮಗಳೂರು: ಪ್ರೀತಿಯನ್ನು ನಿರಾಕರಿಸಿದಳು ಎಂಬ ಒಂದೇ ಒಂದು ಕಾರಣಕ್ಕಾಗಿ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ(Minor girl) ಮೇಲೆ ಆಟದ ಮೈದಾನದಲ್ಲೇ ಅತ್ಯಂತ ಭೀಕರವಾಗಿ ಹಲ್ಲೆ(Assault) ನಡೆಸಿ, ಕಾಲಿನಿಂದ ಹಾಕಿ ತುಳಿದಿರುವ ಆತಂಕಕಾರಿ ಘಟನೆ ಚಿಕ್ಕಮಗಳೂರು(chikkamagaluru) ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ.
ಸಾರ್ವಜನಿಕರು ನೋಡುತ್ತಿದ್ದಂತೆಯೇ ನಡೆದ ಈ ದೌರ್ಜನ್ಯವನ್ನು ಕಂಡು ಸ್ಥಳೀಯ ನಿವಾಸಿಗಳು ಮತ್ತು ಕ್ರೀಡಾಪಟುಗಳು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಮೂಲದ ಪುನೀತ್ ಎಂಬುವವನೇ ಈ ಹೀನಾಯ ಕೃತ್ಯ ಎಸಗಿದ ಆರೋಪಿ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಕಡೂರು ಮೂಲದ ಅಪ್ರಾಪ್ತ ಬಾಲಕಿಯ ಮೇಲೆ ಕಣ್ಣು ಹಾಕಿದ್ದ ಈತ, ನಿರಂತರವಾಗಿ ಆಕೆಯ ಬೆನ್ನುಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ.
ಆದರೆ ಆ ಬಾಲಕಿ ಅಪ್ರಾಪ್ತೆಯಾಗಿದ್ದು, ಇವನ ವಿಪರೀತ ಕಾಟಕ್ಕೆ ಬೇಸತ್ತು ಹೋಗಿ ಸಂಪೂರ್ಣವಾಗಿ ಅಸಹಾಯಕಳಾಗಿದ್ದಳು. ಇವನ ಕಿರುಕುಳಕ್ಕೆ ಹೆದರಿ ಬಾಲಕಿ ಹಾಸ್ಟೆಲ್‌ನಿಂದ ಹೊರಬರುವುದನ್ನೇ ನಿಲ್ಲಿಸಿದಾಗ, ಈತ ಪ್ರತಿದಿನ ಹಾಸ್ಟೆಲ್ ಬಳಿಯೇ ಹೋಗಿ ಗಲಾಟೆ ಮಾಡುತ್ತಿದ್ದರಿಂದ ಹಾಸ್ಟೆಲ್ ವಾರ್ಡನ್ ಕೂಡ ಬಾಲಕಿಗೆ ಎಚ್ಚರಿಕೆ ನೀಡಿದ್ದರು.
ಈ ಹುಚ್ಚು ಪ್ರೇಮಿಯ ಕಾಟ ತಾಳಲಾರದೆ ಬಾಲಕಿ ಹಾಸ್ಟೆಲ್ ಬಿಟ್ಟು ಕೆಲವು ದಿನಗಳ ಕಾಲ ತನ್ನ ಸ್ವಂತ ಊರಿಗೆ ಹೋದರೂ ಈತನ ಕಿರಿಕ್ ನಿಂತಿರಲಿಲ್ಲ. ಬಾಲಕಿಯ ಪೋಷಕರ ಮೊಬೈಲ್ ನಂಬರ್ ಪತ್ತೆಹಚ್ಚಿದ ಆರೋಪಿ ಪುನೀತ್, ಅವರಿಗೂ ಫೋನ್ ಮಾಡಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದನು. ಇದರಿಂದ ಇಡೀ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಇಷ್ಟಾದರೂ ಬುದ್ಧಿ ಕಲಿಯದ ಆರೋಪಿ, ಚಿಕ್ಕಮಗಳೂರು ನಗರದ ಜಿಲ್ಲಾಧಿಕಾರಿ (DC) ಮತ್ತು ಎಸ್‌ಪಿ (SP) ಕಚೇರಿ ಬಳಿಯೇ ಇರುವ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಲಕಿ ಸಿಕ್ಕಾಗ ಮತ್ತೆ ಅಲ್ಲಿಗೂ ಹೋಗಿ ತಕ್ಷಣವೇ ತನ್ನನ್ನು ಪ್ರೀತಿಸುವಂತೆ ಧಮ್ಕಿ ಹಾಕಿದ್ದಾನೆ. ಈ ವೇಳೆ ಬಾಲಕಿ ಧೈರ್ಯ ಮಾಡಿ ಆತನ ಪ್ರೀತಿಯನ್ನು ಕಡಾಖಂಡಿತವಾಗಿ ನಿರಾಕರಿಸಿದ್ದಾಳೆ.
ಇದರಿಂದ ತೀವ್ರ ಕೋಪಗೊಂಡು ಹುಚ್ಚನಂತಾದ ಪುನೀತ್, ಏಕಾಏಕಿ ಅಪ್ರಾಪ್ತೆಯ ಮೇಲೆ ಮುಗಿಬಿದ್ದು ಮನಬಂದಂತೆ ಥಳಿಸಿದ್ದಾನೆ. ಅಷ್ಟೇ ಅಲ್ಲದೆ, ಕೆಳಗೆ ಬಿದ್ದ ಯುವತಿಯನ್ನು ಅತ್ಯಂತ ಕ್ರೂರವಾಗಿ ಕಾಲಿನಿಂದ ಹಾಕಿ ತುಳಿದಿದ್ದಾನೆ. ಈ ಅನಿರೀಕ್ಷಿತ ಭೀಕರ ದಾಳಿಯಿಂದಾಗಿ ಬಾಲಕಿ ತೀವ್ರ ಭಯಭೀತಳಾಗಿ ಕಿರುಚಾಡಿದ್ದಾಳೆ.
ಕ್ರೀಡಾಂಗಣದಲ್ಲಿ ಬಾಲಕಿಯ ಮೇಲೆ ಹೀಗೆ ದಬಾಳಿಕೆ ನಡೆಸಿ ಹಲ್ಲೆ ಮಾಡುತ್ತಿರುವುದನ್ನು ಗಮನಿಸಿದ ಸುತ್ತಮುತ್ತಲಿನ ಸಾರ್ವಜನಿಕರು ಮತ್ತು ಸ್ಥಳೀಯರು ತಕ್ಷಣವೇ ರಕ್ಷಣೆಗೆ ಓಡಿ ಬಂದಿದ್ದಾರೆ. ಭಾರಿ ಸಂಖ್ಯೆಯಲ್ಲಿ ಜನ ತನ್ನ ಕಡೆಗೆ ಬರುತ್ತಿರುವುದನ್ನು ಕಂಡು ಹೆದರಿದ ಪಾಗಲ್ ಪ್ರೇಮಿ ಪುನೀತ್ ಅಲ್ಲಿಂದ ತಕ್ಷಣವೇ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಬಿಡದ ಸ್ಥಳೀಯರು ಆತನನ್ನು ಮೈದಾನದಿಂದ ಹಿಡಿದು ರಸ್ತೆಯವರೆಗೂ ಬೆನ್ನಟ್ಟಿಕೊಂಡು ಹೋಗಿ, ಖುದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಮನೆ ಮುಂದೆಯೇ ತಡೆದು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸ್ಥಳೀಯರು ತಕ್ಷಣವೇ ಮಹಿಳಾ ಪೊಲೀಸ್ ಸಹಾಯವಾಣಿಯಾದ ಅಕ್ಕ ಪಡೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕಠಿಣ ತನಿಖೆಗೆ ಒಳಪಡಿಸಿದ್ದಾರೆ.