ತ್ಯಾಜ್ಯ ತುಂಬಿ, ಗಬ್ಬು ನಾರುತ್ತಿದ್ದ ಬೆಂಗಳೂರಿನ ಹೃದಯ ಭಾಗದಲ್ಲಿರುವ ಶಿವಾಜಿನಗರದ ಚಾಂದಿನಿ ಚೌಕ್‌ಗೆ ಈಗ ಹೊಸ ರೂಪ ಬಂದಿದೆ. ಸ್ಮಾರ್ಟ್ ಸಿಟಿ ಯೋಜನೆ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಬಿಬಿಎಂಪಿ ಅನುದಾನದಡಿ ₹7 ಕೋಟಿ ಖರ್ಚು ಮಾಡಿ ಇಡೀ ಪ್ರದೇಶಕ್ಕೆ ಹೊಸ ಮೆರುಗು ನೀಡಿದ್ದು, ಜನರ ಆಕರ್ಷಣೆಯ ಕೇಂದ್ರವಾಗುತ್ತಿದೆ.
ಹೊಸ ರೂಪ ಪಡೆದಿರುವ ಚಾಂದಿನಿ ಚೌಕ್‌ನಲ್ಲಿ ಶಿವಾಜಿನಗರ ಹಬ್ಬವನ್ನು ಶನಿವಾರ ಆಚರಣೆ ಮಾಡಲಾಗುತ್ತಿದೆ. ಪ್ರಸಿದ್ಧ ಕಲಾವಿದರಿಂದ ಕಲಾ ಪ್ರದರ್ಶನ, ಇತರ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ನಗರದ ವೈವಿಧ್ಯ ಸಂಭ್ರಮಿಸುವ ಮತ್ತು ವಿವಿಧ ಸಮುದಾಯಗಳ ಜನರನ್ನು ಒಟ್ಟುಗೂಡಿಸುವ ಸಾಂಸ್ಕೃತಿಕ ಹಬ್ಬ ಇದಾಗಿದೆ ಎಂದು ಸ್ಥಳೀಯ ಶಾಸಕ ರಿಝ್ವಾನ್ ಅರ್ಷದ್ ಹೇಳಿದ್ದಾರೆ.
ಸುಮಾರು ಮೂರು ಶತಮಾನಗಳ ಇತಿಹಾಸ ಇರುವ ಈ ಪ್ರದೇಶದಲ್ಲಿ 100 ವರ್ಷಗಳಷ್ಟು ಹಳೆಯದಾದ ರಸೆಲ್ ಮಾರುಕಟ್ಟೆ, ಎರಡು ಶತಮಾನಗಳನ್ನು ಕಂಡ ಸೇಂಟ್ ಮೇರಿ ಬೆಸಿಲಿಕಾ ಚರ್ಚ್, 250 ವರ್ಷಗಳಷ್ಟು ಹಿಂದಿನ ಬಾವಿ ಎಲ್ಲಾ ಇದ್ದರೂ ಪ್ರದೇಶ ಮಾತ್ರ ಗಬ್ಬು ನಾರುತ್ತಿತ್ತು. ಈ ಸ್ಥಳವೀಗ ಹಳೆಯ ಗುರುತು ಸಿಗದಷ್ಟು ಬದಲಾಗಿದೆ.
ಇಲ್ಲಿ, 120 ಮೀಟರ್ ಉದ್ದ ಮತ್ತು 13 ಮೀಟರ್ ಅಗಲದ ಜಾಗದಲ್ಲಿ 8 ಪ್ಲಾಜಾಗಳನ್ನು ನಿರ್ಮಿಸಲಾಗಿದ್ದು, ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ಬಳಿಯ ಮೊದಲ ಪ್ಲಾಜಾದಲ್ಲಿ ಎರಡು ಕಾರಂಜಿಗಳನ್ನು ನಿರ್ಮಿಸಲಾಗಿದೆ. 250 ವರ್ಷ ಹಳೆಯದಾದ ಬಾವಿಯ ಸುತ್ತಲೂ ಕುಳಿತುಕೊಳ್ಳಲು, ಹರಟೆ ಹೊಡೆಯಲು ಬೇಕಾದಂತಹ ವ್ಯವಸ್ಥೆಯನ್ನು ಮಾಡಲಾಗಿದ್ದು, ಬಾವಿಗೆ ಎರಡು ಅಡಿ ಆಳದಲ್ಲಿ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಹಾಗಾಗಿ, ಅಪಾಯದ ಸಾಧ್ಯತೆಯನ್ನು ಗೌಣಗೊಳಿಸಲಾಗಿದೆ.
ಭೇಟಿ ನೀಡುವ ಮನಸೊರೆಗೊಳ್ಳುವಂತೆ ಅಲ್ಲಲ್ಲಿ ನೀರಿನ ಕಾರಂಜಿಗಳು, ಕುಳಿತುಕೊಳ್ಳಲು ಆಸನದ ವ್ಯವಸ್ಥೆಗಳು, ಸುಸಜ್ಜಿತ ಶೌಚಾಲಯಗಳು, ಪೊಲೀಸ್ ಚೌಕಿ, ವಾಹನ ಪಾರ್ಕಿಂಗ್ ವ್ಯವಸ್ಥೆಗಳು ನಿರ್ಮಿಸಲಾಗಿದ್ದು, ಪ್ರವಾಸಿ ಸ್ನೇಹಿ ತಾಣವಾಗಿ ಮಾರ್ಪಾಡಾಗಿದೆ. ಪ್ರದೇಶದಲ್ಲಿ 35 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ವಿದ್ಯುತ್ ದೀಪಗಳ ಅಲಂಕಾರದಿಂದ ಚಾಂದಿನಿ ಚೌಕ್ ಅನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದ್ದು, ಬೆಳಕಿನ ಸೀರೆ ಉಟ್ಟಂತೆ ರಸೆಲ್ ಮಾರುಕಟ್ಟೆ ಕಂಗೊಳಿಸುತ್ತಿದೆ. ಇನ್ನೊಂದೆಡೆ 50 ಅಡಿ ಎತ್ತಡದ ವಾಚ್ ಟವರ್ ತಲೆ ಎತ್ತಿ ನಿಂತಿದೆ.
ಚಾಂದಿನಿ ಚೌಕ್ ನ ರೂಪ ಮಾರ್ಪಾಡಿನ ಬಗ್ಗೆ ಪ್ರತಿಕರಿಯಿಸಿರುವ ಶಿವಾಜಿನಗರ ಶಾಸಕ ರಿಝ್ವಾನ್ ಅರ್ಷದ್, ಇನ್ನೂ ಮುರ್ನಾಲ್ಕು ದಿನಗಳಲ್ಲಿ ಕಾಮಗಾರಿ ಸಂಪೂರ್ಣಗೊಳ್ಳಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ.