ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಇಂದಿನಿಂದ ಆರಂಭವಾಗಲಿದ್ದು, 29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿ ಆಯೋಜಿಸುತ್ತಿದೆ. ಅದರಂತೆ ಕರಾಚಿಯ ಪಾಕಿಸ್ತಾನ- ನ್ಯೂಜಿಲೆಂಡ್ ಪಂದ್ಯದೊಂದಿಗೆ ಆರಂಭವಾಗುತ್ತಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥ್ಯ ವಹಿಸಿಕೊಂಡಗಿನಿಂದ ಒಂದಲ್ಲ ಒಂದು ವಿವಾದ ಎದುರಿಸುತ್ತಿದ್ದ ಪಾಕ್ ಇದೀಗ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ಟೂರ್ನಿ ಮೊದಲ ಪಂದ್ಯವನ್ನು ಬಲಿಷ್ಟ ನ್ಯೂಜಿಲೆಂಡ್ ವಿರುದ್ಧ ಎದುರಿಸಲಿದ್ದಾರೆ.
ಈಗಾಗಲೇ ತ್ರಿಕೋನ ಸರಣಿಯಲ್ಲಿ ಗೆದ್ದು ಬೀಗಿರುವ ಕಿವೀಸ್ ತಂಡಕ್ಕೆ ಪಂದ್ಯ ಆರಂಭಕ್ಕೂ ಮುನ್ನವೇ ಆಘಾತ ಎದುರಾಗಿದ್ದು, ಆಫ್ಘನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡ ಕಾರಣ ತಂಡದ ವೇಗಿ ಲಾಕಿ ಫರ್ಗುಸನ್ ಇಡೀ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮುಖಾಮುಖಿಯಾದ ಉಭಯ ತಂಡಗಳಲ್ಲಿ ಪಾಕಿಸ್ತಾನವೇ ಮೇಲುಗೈ ಸಾಧಿಸಿದೆ. ಮುಖಾಮುಖಿಯಾದ 118 ಪಂದ್ಯಗಳ ಪೈಕಿ 61ರಲ್ಲಿ ಗೆದ್ದಿದೆ. ನ್ಯೂಜಿಲೆಂಡ್ 53ರಲ್ಲಿ ಜಯಿಸಿದೆ. ಪಾಕಿಸ್ತಾನ ಕಳೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಕಿವೀಸ್ 2000ರಲ್ಲಿ ಗೆದ್ದಿದ್ದೇ ಕೊನೆ.
ಇನ್ನು ನಾಳೆ ಅಂದರೆ ಫೆ.20 ರಂದು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಟೀಂ ಇಂಡಿಯಾ ಪಾಕ್ ಗೆ ಹೋಗಲು ನಿರಾಕರಿಸಿದ ಹಿನ್ನಲೆ ಪಂದ್ಯವನ್ನು ದುಬೈನಲ್ಲಿ ಆಯೋಜಿಸಲಾಗಿದೆ.