ಬೆಂಗಳೂರು: ರಾಜ್ಯದಲ್ಲಿ ಕೋಮು ಗಲಭೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಪಣತೊಟ್ಟಿರುವ ಪೊಲೀಸ್ ಇಲಾಖೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಮೇಲೆ ಕೂಡ ಕಾನೂನು ಕ್ರಮಕ್ಕೆ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ 2022ರಿಂದ 2025 ವರೆಗೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಇರುವ ಎಲ್ಲಾ ದೂರುಗಳ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚಕ್ರವರ್ತಿ ಸೂಲಿಬೆಲೆ, ‘ಇದು ಕಾಂಗ್ರೆಸ್ ಚಾಳಿಯಾಗಿದ್ದು ಹೊಸದೇನು ಅಲ್ಲ. ಸಿದ್ದರಾಮಯ್ಯ ಸರ್ಕಾರ ಹೆದರಿಕೊಂಡಿದ್ದು, ಕೆಲ ಜಿಲ್ಲೆಗಳಿಗೆ ಹೋಗದಂತೆ ನಿರ್ಬಂಧ ಮಾಡಿ, ಗೂಂಡಾ ಕಾಯ್ದೆ ಹಾಕಲು ಪ್ರಯತ್ನ ನಡೆಯುತ್ತಿರಬಹುದು. ನನ್ನ ಮೇಲೆ ಒಂದೇ ಒಂದು ಕೋಮು ದ್ವೇಷದ ಪ್ರಕರಣವಿಲ್ಲ. ಆರ್‌ಸಿಬಿ ಕಾಲ್ತುಳಿತವನ್ನು ಮರೆಸಲು, ಜನರ ಗಮನ ಡೈವೋರ್ಟ್ ಮಾಡಲು ಸರ್ಕಾರ ಹೀಗೆ ಮಾಡುತ್ತಿರಬಹುದು’ ಎಂದಿದ್ದಾರೆ.
‘ನನ್ನ ಧ್ವನಿಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಈ ರೀತಿ ಮಾಡುತ್ತಿದೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ. 2022-25ರ ನನ್ನ ವಿರುದ್ಧದ ಪ್ರಕರಣಗಳ ಬಗ್ಗೆ ಕಷ್ಟ ಪಡುವ ಅಗತ್ಯವಿಲ್ಲ. ನಾನೇ ನನ್ನ ಕೇಸುಗಳ ಬಗ್ಗೆ ಮಾಹಿತಿ ಕೊಡುತ್ತೇನೆ. ಕಾಂಗ್ರೆಸ್ ಸರ್ಕಾರ ಅದೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಆಗಿರುವ ಎಫ್‌ಐಆರ್‌ಗಳು’ ಎಂದಿದ್ದಾರೆ.