Thursday, July 16, 2026
HomeದೇಶGOLD MONETISATION : ಮನೆಯಲ್ಲಿರುವ ಚಿನ್ನಕ್ಕೆ ಸಿಗಲಿದೆ ಭರ್ಜರಿ ಬಡ್ಡಿ: ಸರ್ಕಾರ ತರುತ್ತಿದೆ ಹೊಸ ಗೋಲ್ಡ್...

GOLD MONETISATION : ಮನೆಯಲ್ಲಿರುವ ಚಿನ್ನಕ್ಕೆ ಸಿಗಲಿದೆ ಭರ್ಜರಿ ಬಡ್ಡಿ: ಸರ್ಕಾರ ತರುತ್ತಿದೆ ಹೊಸ ಗೋಲ್ಡ್ ಸ್ಕೀಮ್

ನವದೆಹಲಿ : ಭಾರತೀಯರ ಮನೆಗಳಲ್ಲಿ ಸುಮ್ಮನೆ ಬಿದ್ದಿರುವ ಬಂಗಾರವನ್ನು (Gold) ಮಾರುಕಟ್ಟೆಗೆ ತರಲು ಕೇಂದ್ರ ಸರ್ಕಾರ (Central Government) ಈಗ ಭರ್ಜರಿ ಪ್ಲಾನ್ ಒಂದನ್ನು ಸಿದ್ಧಪಡಿಸುತ್ತಿದೆ.

ಹೌದು, ದೇಶದ ಜನರ ಬಳಿ ಸುಮಾರು 30,000 ಟನ್‌ನಷ್ಟು ಚಿನ್ನ ಬಳಕೆಯಾಗದೆ ಹಾಗೆಯೇ ಉಳಿದಿದೆ ಎಂದು ಅಂದಾಜಿಸಲಾಗಿದ್ದು, ಇದನ್ನು ಬ್ಯಾಂಕುಗಳ (Bank) ವ್ಯವಸ್ಥೆಯೊಳಗೆ ತರಲು ‘ಚಿನ್ನದ ನಗದೀಕರಣ ಯೋಜನೆ’ಯನ್ನು (Gold Monetisation) ಸಂಪೂರ್ಣವಾಗಿ ಹೊಸ ರೂಪದಲ್ಲಿ ತರಲು ಚಿಂತನೆ ನಡೆಸಲಾಗುತ್ತಿದೆ.

ಇದಕ್ಕಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ನಿಮ್ಮ ಪರಿಚಿತ ಚಿನ್ನದ ಅಂಗಡಿಗಳ ಮಾಲೀಕರನ್ನು ಅಂದರೆ ಜ್ಯುವೆಲರ್ಸ್ ರನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಕುರಿತು ಸರ್ಕಾರದ ಹಿರಿಯ ಸಚಿವರು, ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಮತ್ತು ಚಿನ್ನದ ಉದ್ಯಮಿಗಳ ನಡುವೆ ಹಲವು ಸುತ್ತಿನ ಮಾತುಕತೆಗಳು ಈಗಾಗಲೇ ನಡೆದಿವೆ.

ಜ್ಯುವೆಲರಿ ಅಂಗಡಿಗಳೇ ಇನ್ನು ಕಲೆಕ್ಷನ್ ಸೆಂಟರ್

ಈ ಹೊಸ ಯೋಜನೆಯ ಪ್ರಕಾರ, ನೀವು ಇನ್ನು ಮುಂದೆ ಚಿನ್ನವನ್ನು ಬ್ಯಾಂಕಿಗೆ ತಗೊಂಡು ಹೋಗುವ ಅಗತ್ಯವಿರುವುದಿಲ್ಲ. ಬದಲಿಗೆ ನಿಮ್ಮ ಊರಿನ ಪರಿಚಿತ ಚಿನ್ನದ ವ್ಯಾಪಾರಿಗಳ ಬಳಿಯೇ ಹೋಗಿ ಈ ಯೋಜನೆಯ ಲಾಭ ಪಡೆಯಬಹುದು.

ಈ ವ್ಯಾಪಾರಿಗಳು ಗ್ರಾಹಕರಿಂದ ಚಿನ್ನವನ್ನು ಪಡೆದು, ಅದರ ಶುದ್ಧತೆಯನ್ನು ಪರೀಕ್ಷಿಸಿ, ನಂತರ ಅದನ್ನು ಅಧಿಕೃತ ಬ್ಯಾಂಕುಗಳಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ. ಇದಕ್ಕಾಗಿ ಸರ್ಕಾರ ಅವರಿಗೆ ನಿಶ್ಚಿತ ಸೇವಾ ಶುಲ್ಕವನ್ನು ಕೂಡ ನೀಡಲಿದೆ. ಇದರಿಂದ ಜನರಿಗೂ ಸುಲಭವಾಗಿ ನಂಬಿಕೆ ಬರುತ್ತದೆ ಮತ್ತು ವ್ಯಾಪಾರಿಗಳಿಗೂ ಕಡಿಮೆ ದರದಲ್ಲಿ ವ್ಯಾಪಾರಕ್ಕೆ ಬೇಕಾದ ಬಂಗಾರ ಸಿಗುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿದೆ.

ಹಳೆಯ ಯೋಜನೆಯ ಬದಲಾವಣೆ

ಚಿನ್ನದ ನಗದೀಕರಣ ಯೋಜನೆಯನ್ನು ಸರ್ಕಾರ ಮೊದಲು 2015 ರಲ್ಲಿಯೇ ಜಾರಿಗೆ ತಂದಿತ್ತು. ಆದರೆ ಕಳೆದ 11 ವರ್ಷಗಳಲ್ಲಿ ಈ ಯೋಜನೆಯ ಮೂಲಕ ಕೇವಲ 39 ಟನ್ ಚಿನ್ನ ಮಾತ್ರ ಬ್ಯಾಂಕುಗಳಿಗೆ ಬಂದಿದೆ. ಜನರು ಈ ಯೋಜನೆಯತ್ತ ಅಷ್ಟಾಗಿ ಆಕರ್ಷಿತರಾಗದ ಕಾರಣ, ಸರ್ಕಾರ ಕಳೆದ ವರ್ಷವಷ್ಟೇ ಇದರಲ್ಲಿದ್ದ ಮಧ್ಯಮ ಮತ್ತು ದೀರ್ಘಾವಧಿಯ ಠೇವಣಿಗಳನ್ನು ರದ್ದುಗೊಳಿಸಿತ್ತು.

ಪ್ರಸ್ತುತ ಕೇವಲ 1 ರಿಂದ 3 ವರ್ಷಗಳ ಅಲ್ಪಾವಧಿ ಠೇವಣಿ ಮಾತ್ರ ಚಾಲ್ತಿಯಲ್ಲಿದೆ. ಈ ಯೋಜನೆಯಲ್ಲಿ ಕನಿಷ್ಠ 10 ಗ್ರಾಂ ಚಿನ್ನವನ್ನು ಇಟ್ಟು ಎಷ್ಟು ಬೇಕಾದರೂ ಬಡ್ಡಿ ಗಳಿಸಬಹುದಾಗಿದೆ. ನಿಮ್ಮ ಚಿನ್ನವನ್ನು ಕರಗಿಸಿ ಶುದ್ಧ ಚಿನ್ನವನ್ನಾಗಿ ಮಾಡಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಯೋಜನೆ ಪೂರ್ಣಗೊಂಡ ನಂತರ ಬಂಗಾರದ ರೂಪದಲ್ಲಿ ಅಥವಾ ಆ ಸಮಯದ ಮಾರುಕಟ್ಟೆ ಬೆಲೆಯ ನಗದನ್ನು ನೀವು ಪಡೆಯಬಹುದು.

ಆಮದು ಕಡಿತಕ್ಕೆ ಪ್ರಧಾನಿ ಮೋದಿ ಕರೆ

ಕಳೆದ ಮೇ ತಿಂಗಳಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಉಂಟಾದ ಯುದ್ಧದ ಭೀತಿಯಿಂದಾಗಿ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನದ ಖರೀದಿಯನ್ನು ಕಡಿಮೆ ಮಾಡುವಂತೆ ದೇಶದ ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಮೇ ತಿಂಗಳಲ್ಲಿ ಚಿನ್ನದ ಆಮದು ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ. ಆದರೂ ಕೂಡ ಒಂದೇ ತಿಂಗಳಲ್ಲಿ ಸುಮಾರು 12 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ. ವಿದೇಶದಿಂದ ಚಿನ್ನ ತರಿಸುವುದನ್ನು ಕಡಿಮೆ ಮಾಡದಿದ್ದರೆ ದೇಶದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಲಿದೆ.

ಹಬ್ಬದ ಸೀಸನ್ ಒಳಗೆ ಹೊಸ ಕೊಡುಗೆ ಸಾಧ್ಯತೆ

ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ ಮತ್ತು ಅದರ ಮೇಲಿನ ಆಮದು ಸುಂಕವೂ ಹೆಚ್ಚಾಗಿದೆ. ಇದರಿಂದಾಗಿ ಒಡವೆಗಳ ಮಾರಾಟ ಕಡಿಮೆಯಾಗಿದ್ದು, ಚಿನ್ನದ ಉದ್ಯಮದ ಮೇಲೆಯೂ ಪರಿಣಾಮ ಬೀರಿದೆ. ಹೀಗಾಗಿ ಮುಂಬರುವ ಹಬ್ಬದ ದಿನಗಳಿಗೂ ಮುನ್ನವೇ, ಅಂದರೆ ಬರುವ ಆಗಸ್ಟ್ ತಿಂಗಳಿನಲ್ಲಿಯೇ ಈ ಪರಿಷ್ಕೃತ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಉದ್ಯಮಿಗಳು ನೀಡಿದ ಸಲಹೆಗಳನ್ನು ಪರಿಶೀಲಿಸುತ್ತಿರುವ ಸರ್ಕಾರ, ಹಬ್ಬಗಳ ಸೀಸನ್‌ನಲ್ಲಿ ಗ್ರಾಹಕರನ್ನು ಸೆಳೆಯಲು ಈ ಹೊಸ ಯೋಜನೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಹೊರಟಿದೆ.

ಇದನ್ನೂ ಓದಿ : ಕಿರಾಣಿ ಅಂಗಡಿಗಳ ರಕ್ಷಣೆಗೆ ಮಹತ್ವದ ನಿರ್ಧಾರ, ಬ್ಲಿಂಕಿಟ್‌ ಸೇವೆ ನಿರ್ಬಂಧ!

ಹೆಚ್ಚಿನ ಸುದ್ದಿ

Change Language »
error: Content is protected !!