Thursday, July 16, 2026
Homeಕ್ರೈಂBIG NEWS : ಬೆಂಗಳೂರಲ್ಲಿ ಏಕಕಾಲಕ್ಕೆ 30ಕ್ಕೂ ಹೆಚ್ಚು ಅಡ್ಡಾಗಳ ಮೇಲೆ ಸಿಸಿಬಿ ಮಿಂಚಿನ ದಾಳಿ,...

BIG NEWS : ಬೆಂಗಳೂರಲ್ಲಿ ಏಕಕಾಲಕ್ಕೆ 30ಕ್ಕೂ ಹೆಚ್ಚು ಅಡ್ಡಾಗಳ ಮೇಲೆ ಸಿಸಿಬಿ ಮಿಂಚಿನ ದಾಳಿ, ಭಾರಿ ಮಾರಕಾಸ್ತ್ರ ವಶ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ(bengaluru) ಸದ್ದಿಲ್ಲದೆ ತಲೆ ಎತ್ತಲು ಯತ್ನಿಸುತ್ತಿದ್ದ ರೌಡಿಲೋಕಕ್ಕೆ ಕೇಂದ್ರ ಅಪರಾಧ ವಿಭಾಗದ (ccb) ಪೊಲೀಸರು ಭರ್ಜರಿ ಆಪರೇಷನ್ ನಡೆಸುವ ಮೂಲಕ ಸಿಂಹಸ್ವಪ್ನವಾಗಿದ್ದಾರೆ. ನಗರದ ಕಾನೂನು ಸುವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿಡಲು ಮತ್ತು ಸಾರ್ವಜನಿಕರಲ್ಲಿ ಧೈರ್ಯ ತುಂಬಲು ತಡರಾತ್ರಿ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳ ಜಂಟಿ ತಂಡ, ಏಕಕಾಲದಲ್ಲಿ 30ಕ್ಕೂ ಹೆಚ್ಚು ಕುಖ್ಯಾತ ರೌಡಿಶೀಟರ್‌ಗಳ ಮನೆಗಳ ಮೇಲೆ ಮಿಂಚಿನ ದಾಳಿ ನಡೆಸಿದೆ.

ಮಧ್ಯರಾತ್ರಿ ನುಗ್ಗಿದ ಖಾಕಿ ಪಡೆ: ಸಿಕ್ಕಿಬಿದ್ದವು ಮಾರಕಾಸ್ತ್ರಗಳು
ನಗರದ ವಿವಿಧ ಭಾಗಗಳಲ್ಲಿ ರೌಡಿಗಳು ಅಡಗಿರುವ ಮತ್ತು ಸಮಾಜವಿರೋಧಿ ಕೃತ್ಯಗಳಿಗೆ ಸಂಚು ರೂಪಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಈ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಎಲ್ಲರೂ ಗಾಢ ನಿದ್ರೆಯಲ್ಲಿದ್ದ ಮಧ್ಯರಾತ್ರಿಯ ಹೊತ್ತಿಗೆ ರೌಡಿಗಳ ಮನೆಗಳಿಗೆ ಏಕಾಏಕಿ ನುಗ್ಗಿದ ಪೊಲೀಸರು ಜಾಲಾಡಿದ್ದಾರೆ. ಈ ವೇಳೆ ತೀವ್ರ ಶೋಧ ನಡೆಸಿದಾಗ ಹಲವರ ಮನೆಗಳಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಚಾಕು, ಲಾಂಗ್ ಹಾಗೂ ಮಚ್ಚು ಸೇರಿದಂತೆ ಭಾರಿ ಪ್ರಮಾಣದ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಅಧಿಕಾರಿಗಳು ಎಲ್ಲವನ್ನೂ ವಶಕ್ಕೆ ಪಡೆದಿದ್ದಾರೆ.

ಜೈಲಿನಿಂದ ಬಂದವರ ಜಾತಕ ಜಾಲಾಡಿದ ಪೊಲೀಸರು
ಸಿಸಿಬಿ ಪೊಲೀಸರ ಈ ಕಾರ್ಯಾಚರಣೆ ಕೇವಲ ಶೋಧಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇತ್ತೀಚೆಗೆ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ರೌಡಿಗಳು ಪ್ರಸ್ತುತ ಏನು ಮಾಡುತ್ತಿದ್ದಾರೆ? ಯಾರ ಜೊತೆ ಸಂಪರ್ಕದಲ್ಲಿದ್ದಾರೆ? ಮತ್ತು ಅವರ ಮುಂದಿನ ಯೋಜನೆಗಳೇನು ಎಂಬ ಸಂಪೂರ್ಣ ಜಾತಕವನ್ನು ಅಧಿಕಾರಿಗಳು ಕಲೆಹಾಕಿದ್ದಾರೆ. ಹಳೇ ರೌಡಿಗಳ ಪ್ರತಿಯೊಂದು ಚಟುವಟಿಕೆಯ ಮೇಲೂ ನಿಗಾ ಇರಿಸಲಾಗಿದ್ದು, ಯಾವುದೇ ಕಾರಣಕ್ಕೂ ಮತ್ತೆ ಅಪರಾಧ ಲೋಕಕ್ಕೆ ಕಾಲಿಡದಂತೆ ಹಾಗೂ ನಗರದ ಶಾಂತಿಗೆ ಭಂಗ ತರದಂತೆ ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಸಮಾಜವಿರೋಧಿಗಳಿಗೆ ಇಲಾಖೆಯಿಂದ ನೇರ ಎಚ್ಚರಿಕೆ
ಬೆಂಗಳೂರಿನಲ್ಲಿ ಸಾರ್ವಜನಿಕರ ನೆಮ್ಮದಿ ಕೆಡಿಸುವ ರೌಡಿಗಳ ವಿರುದ್ಧ ಸಿಸಿಬಿ ಕಠಿಣ ನಿಲುವು ತಳೆದಿದೆ. ನಗರದ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಿಸಿಬಿಯ ಈ ಹಠಾತ್ ದಾಳಿಗಳು ಮುಂದಿನ ದಿನಗಳಲ್ಲೂ ಮುಂದುವರಿಯಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಯಾವುದೇ ರಾಜಿ ಇಲ್ಲದೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವುದಾಗಿ ಇಲಾಖೆ ಸ್ಪಷ್ಟ ಸಂದೇಶ ರವಾನಿಸಿದೆ.

ಇದನ್ನೂ ಓದಿ : ಮೂರೇ ದಿನದಲ್ಲಿ 202 ಕಿಮೀ, ಫುಟ್‌ಪಾತ್ ಒತ್ತುವರಿ ತೆರವು – ಜಿಬಿಎ ಜೆಸಿಬಿ ಕಾರ್ಯಾಚರಣೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ!

ಹೆಚ್ಚಿನ ಸುದ್ದಿ

Change Language »
error: Content is protected !!