ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ಆರಂಭಿಸಿರುವ 10 ಮತ್ತು 12ನೇ ತರಗತಿಯ ಮರುಮೌಲ್ಯಮಾಪನ (Re-evaluation) ಪೋರ್ಟಲ್ ಆರಂಭವಾದ ಕೆಲವೇ ಗಂಟೆಗಳಲ್ಲಿ ದೊಡ್ಡ ಮಟ್ಟದಲ್ಲಿ ಸೈಬರ್ ದಾಳಿಗೆ ತುತ್ತಾಗಿದೆ. ಕೇವಲ ಎರಡು ನಿಮಿಷಗಳ ಅವಧಿಯಲ್ಲಿ ಈ ಪೋರ್ಟಲ್ ಮೇಲೆ ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಹಿಟ್ಸ್ (Hits) ದಾಖಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಬಾರಿ ಅನಧಿಕೃತವಾಗಿ ಫೈಲ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಲಾಗಿದೆ ಎಂದು ಸಿಬಿಎಸ್‌ಇ ತನ್ನ ಅಧಿಕೃತ X (ಟ್ವಿಟರ್) ಖಾತೆಯಲ್ಲಿ ತಿಳಿಸಿದೆ. ಆದರೆ, ಇಷ್ಟೆಲ್ಲಾ ಭಾರಿ ಸೈಬರ್ ದಾಳಿಗಳ ನಡುವೆಯೂ ಪೋರ್ಟಲ್ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಮಂಗಳವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ 16,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮರುಮೌಲ್ಯಮಾಪನ ಅರ್ಜಿಯನ್ನು ಸಲ್ಲಿಸಿದ್ದಾರೆ.
1.5 ಮಿಲಿಯನ್ (15 ಲಕ್ಷ) ಕೃತಕ ಟ್ರಾಫಿಕ್
ಸಿಬಿಎಸ್‌ಇ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಹ್ಯಾಕರ್‌ಗಳು ಪೋರ್ಟಲ್ ಅನ್ನು ಕ್ರ್ಯಾಶ್ ಮಾಡುವ ಉದ್ದೇಶದಿಂದ ಡಿನೈಯಲ್ ಆಫ್ ಸರ್ವಿಸ್’ (DoS) ಮಾದರಿಯ ಸೈಬರ್ ದಾಳಿಯನ್ನು ನಡೆಸಿದ್ದಾರೆ. ಕೇವಲ ಎರಡು ನಿಮಿಷಗಳಲ್ಲಿ 1.5 ಮಿಲಿಯನ್ (15 ಲಕ್ಷ) ಕೃತಕ ಟ್ರಾಫಿಕ್ ಅನ್ನು ಸೃಷ್ಟಿಸಿ ವೆಬ್‌ಸೈಟ್ ಮುಚ್ಚಿಹೋಗುವಂತೆ ಮಾಡುವ ಪ್ರಯತ್ನ ಇದಾಗಿತ್ತು. ಇದರ ಜೊತೆಗೆ ಸಿಸ್ಟಮ್‌ನ ಒಳಗಿರುವ ಪ್ರಮುಖ ಫೈಲ್‌ಗಳನ್ನು ಪ್ರವೇಶಿಸಲು 1 ಲಕ್ಷಕ್ಕೂ ಹೆಚ್ಚು ಬಾರಿ ಅನಧಿಕೃತ ಪ್ರಯತ್ನಗಳು ನಡೆದಿವೆ. ಆದರೆ ಸಿಬಿಎಸ್‌ಇ ಸುರಕ್ಷತಾ ತಂತ್ರಜ್ಞಾನವು ಈ ದಾಳಿಯನ್ನು ಯಶಸ್ವಿಯಾಗಿ ತಡೆದಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಮುಂದುವರಿಸಿದೆ.
ಧರ್ಮೇಂದ್ರ ಪ್ರಧಾನ್ ಅಂದಾಜು ತಲೆಕೆಳಗೆ?
ಪ್ರಸ್ತುತ ಈ ಪೋರ್ಟಲ್ ಏಕಕಾಲದಲ್ಲಿ 8,000 ಕ್ಕೂ ಹೆಚ್ಚು ಬಳಕೆದಾರರನ್ನು (Concurrent Users) ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಈ ಬಾರಿ ಮರುಮೌಲ್ಯಮಾಪನಕ್ಕೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆ ಮಾತ್ರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಲೆಕ್ಕಾಚಾರವನ್ನು ತಲೆಕೆಳಗಾಗಿಸುವ ಮುನ್ಸೂಚನೆ ನೀಡಿದೆ. ಅರ್ಹ ವಿದ್ಯಾರ್ಥಿಗಳ ಪೈಕಿ ಕೇವಲ ಶೇ. 20 ರಷ್ಟು ಅಂದರೆ ಅಂದಾಜು 80,000 ವಿದ್ಯಾರ್ಥಿಗಳು ಮಾತ್ರ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಶಿಕ್ಷಣ ಸಚಿವರು ಈ ಹಿಂದೆ ಸೂಚಿಸಿದ್ದರು. ಆದರೆ, ಪೋರ್ಟಲ್ ತೆರೆದ ಕೇವಲ 9 ರಿಂದ 10 ಗಂಟೆಗಳ ಒಳಗೆ ಈಗಾಗಲೇ 16,000 ಅರ್ಜಿಗಳು ಸಲ್ಲಿಕೆಯಾಗಿದ್ದು, ಇನ್ನು ಮೂರು ದಿನಗಳ ಕಾಲಾವಕಾಶ ಬಾಕಿ ಇರುವುದರಿಂದ ಒಟ್ಟು ಅರ್ಜಿಗಳ ಸಂಖ್ಯೆ ಸಚಿವರ ಅಂದಾಜಿಗಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಬಿಎಸ್‌ಇ ಈ ಬಾರಿ ಪೋರ್ಟಲ್‌ನಲ್ಲಿ ಕೆಲವು ಪ್ರಮುಖ ತಾಂತ್ರಿಕ ಬದಲಾವಣೆಗಳನ್ನು ತಂದಿದೆ. ಅರ್ಜಿ ಸಲ್ಲಿಸುವಾಗ ಮಧ್ಯದಲ್ಲೇ ಸೆಷನ್ ಎಕ್ಸ್‌ಪೈರ್ (Session Expire) ಆಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸೆಷನ್ ಸಮಯದ ಮಿತಿಯನ್ನು ವಿಸ್ತರಿಸಲಾಗಿದೆ. ಸಿಬಿಎಸ್‌ಇಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಸಿಸ್ಟಮ್‌ನಲ್ಲಿ ತಾಂತ್ರಿಕ ದೋಷಗಳು ಮತ್ತು ಫಲಿತಾಂಶದ ನಂತರದ ಸೇವೆಗಳಲ್ಲಿ ವಿಳಂಬವಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದ ಬೆನ್ನಲ್ಲೇ ಈ ಸೈಬರ್ ದಾಳಿ ನಡೆದಿರುವುದು ತಾಂತ್ರಿಕ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸದ್ಯ ತಾಂತ್ರಿಕ ವಿಭಾಗದ ತಂಡಗಳು 24 ಗಂಟೆಗಳ ಕಾಲ ಪೋರ್ಟಲ್ ಅನ್ನು ನಿರಂತರವಾಗಿ ಕಾವಲು ಕಾಯುತ್ತಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ಅಡ್ಡಿಯಾಗದಂತೆ ನಿರಂತರ ಸೇವೆ ಒದಗಿಸುತ್ತಿವೆ.
ಇದನ್ನೂ ಓದಿ: ಸಿಬಿಎಸ್‌ಇ 12ನೇ ತರಗತಿ ಮರುಮೌಲ್ಯಮಾಪನ ಪೋರ್ಟಲ್ ಓಪನ್ – ಹೀಗೆ ಅರ್ಜಿ ಸಲ್ಲಿಸಿ!