ನವದೆಹಲಿ: ನಕಲಿ ಎನ್ ಕೌಂಟರ್ ಪ್ರಕರಣವೊಂದಕ್ಕೆ ಸಂಬಂಧಿಸಿ ತನ್ನ ವಿಚಾರಣೆ ನಡೆಸುತ್ತಿದ್ದಾಗ ಈ ಪ್ರಕರಣದಲ್ಲಿ ಪ್ರಧಾನಿ ಮೋದಿಯವರನ್ನು ಸಿಲುಕಿಸುವಂತೆ ಸಿಬಿಐ ತನ್ನ ಮೇಲೆ ಒತ್ತಡ ಹೇರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಆಡಳಿತದ ಸಂದರ್ಭ ಸಿಬಿಐ ತನ್ನ ಮೇಲೆ ಒತ್ತಡ ಹೇರುತ್ತಿದ್ದುದಾಗಿ ಅವರು ಹೇಳಿದ್ದಾರೆ.
ನರೇಂದ್ರ ಮೋದಿ ಸರಕಾರ ಸರಕಾರಿ ಏಜೆನ್ಸಿಗಳನ್ನು ಬಳಸಿ ತಮ್ಮನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ‘‘ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಕಲಿ ಎನ್ ಕೌಂಟರ್ ಪ್ರಕರಣವೊಂದರಲ್ಲಿ ಮೋದಿಜಿ ಅವರನ್ನು ಸಿಲುಕಿಸುವಂತೆ ಸಿಬಿಐ ನನ್ನ ಮೇಲೆ ಒತ್ತಡ ಹೇರುತ್ತಿತ್ತು. ಬಿಜೆಪಿ ಈ ಬಗ್ಗೆ ಯಾವತ್ತೂ ಗದ್ದಲ ಮಾಡಿಲ್ಲ’’ ಎಂದರು.
ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೋರ್ಟ್ ನಿಂದ ದೋಷಿ ಎಂದು ಆದೇಶ ಬಂದು ಲೋಕಸಭಾ ಸದಸ್ಯತ್ವ ಅನರ್ಹಗೊಂಡ ರಾಜಕಾರಣಿ ರಾಹುಲ್ ಮಾತ್ರ ಅಲ್ಲ. ಮೇಲಿನ ಕೋರ್ಟ್ ಗೆ ಹೋಗುವ ಬದಲು ರಾಹುಲ್ ಗಾಂಧಿ ಅಳುತ್ತಿದ್ದು, ಅವರ ವಿಧಿಗೆ ನರೇಂದ್ರ ಮೋದಿಯನ್ನು ದೂಷಿಸುತ್ತಿದ್ದಾರೆ ಎಂದರು.