ರಾಮನಗರ ಜಿಲ್ಲೆಯ ಕನಕಪುರದ ಸಾತನೂರು ಬಳಿ ಹಿಂದುತ್ವವಾದಿಗಳು ನಡೆಸಿದ ದಾಳಿಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಆರೋಪ ಕೇಳಿ ಬಂದಿದೆ. ಜಾನುವಾರು ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ ಪುನೀತ್ ಕೆರೆಹಳ್ಳಿ ಮತ್ತವನ ತಂಡ ವಾಹನದಲ್ಲಿದ್ದವರ ಮೇಲೆ ಮಾಡಿದ ಹಲ್ಲೆಯಿಂದ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತ ವ್ಯಕ್ತಿಯನ್ನು ಇರ್ಗೀಷ್ ಪಾಷ ಎಂದು ಗುರುತಿಸಲಾಗಿದೆ. ಇವರು ಮಂಡ್ಯ ಮೂಲದವರಾಗಿದ್ದು, ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದರು.
ಈ ವೇಳೆ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ಕ್ಯಾಂಟರ್ ಮೇಲೆ ದಾಳಿ ಮಾಡಿದೆ. ಈ ವಾಹನದಲ್ಲಿ ಜಾನುವಾರು ಸಾಗಾಟ ನಡೆಯುತ್ತಿರುವುದರ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ತಂಡ ಕಾದು ಕುಳಿತು ಆಕ್ರಮಣ ನಡೆಸಿದೆ ಎನ್ನಲಾಗಿದೆ.
ವಾಹನದಲ್ಲಿದ್ದ ಜಾನುವಾರುಗಳನ್ನು ಪುನೀತ್ ತಂಡ ತಮ್ಮ ವಶಕ್ಕೆ ಪಡೆದಿದ್ದು, ಈ ವೇಳೆ ಇಗ್ರೀಷ್ ವಾಹನದಿಂದ ಇಳಿದು ಓಡಿಹೋಗಿದ್ದರು. ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಇರ್ಗೀಷ್ ಮೃತದೇಹ ಪತ್ತೆಯಾಗಿದೆ. ಇಗ್ರೀಶ್ ಮೇಲೆ ಪುನೀತ್ ಕೆರೆಹಳ್ಳಿ ತಂಡ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದು, ಸಾತನೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಸಾತನೂರು ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ ಎನ್ನಲಾಗಿದ್ದು, ಕೆರೆಹಳ್ಳಿಯನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.