Thursday, July 16, 2026
Homeಕ್ರೈಂCAPGEMINI HORROR: ಡೇ ಕೇರ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಕೇಸ್ - ವಿಡಿಯೋ ಮಾಡಿದ್ದ ಮಹಿಳೆ...

CAPGEMINI HORROR: ಡೇ ಕೇರ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಕೇಸ್ – ವಿಡಿಯೋ ಮಾಡಿದ್ದ ಮಹಿಳೆ ಅರೆಸ್ಟ್‌

ಬೆಂಗಳೂರು: ಬೆಂಗಳೂರಿನ (Bengaluru) ಬ್ರೂಕ್‌ಫೀಲ್ಡ್‌ನಲ್ಲಿರುವ (Brookefield) ಕ್ಯಾಪ್‌ ಜೆಮಿನಿ ಕಂಪನಿಯ (Capgemini) ಡೇ ಕೇರ್ (Day Care) ಸೆಂಟರ್‌ನಲ್ಲಿ ಮಕ್ಕಳ ಮೇಲೆ ನಡೆದಿದ್ದ ದೌರ್ಜನ್ಯದ (Crime) ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಬೇರೆಯವರಿಗೆ ಕಳುಹಿಸಿದ್ದ ಮಾಜಿ ಉದ್ಯೋಗಿ ಸುಜಾತ (50) ಎಂಬುವವರನ್ನು ಹೆಚ್‌ಎಎಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಡೇ ಕೇರ್ ಸೆಂಟರ್‌ನಲ್ಲಿ ಮಕ್ಕಳ ಮೇಲೆ ನಡೆದಿದ್ದ ದೌರ್ಜನ್ಯದ ವಿಡಿಯೊದ ಮೂಲವನ್ನು ಪತ್ತೆಹಚ್ಚಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಈ ವೇಳೆ ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದ ಸುಜಾತ ಅವರೇ ಈ ವಿಡಿಯೊ ಮಾಡಿರುವುದು ಬೆಳಕಿಗೆ ಬಂದಿದೆ. ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಭಿನ್ನ ಹೇಳಿಕೆಗಳನ್ನು ನೀಡಿದ್ದರೂ, ಅವರೇ ವಿಡಿಯೊ ಮಾಡಿರುವುದಕ್ಕೆ ಪೂರಕ ಸಾಕ್ಷ್ಯಾಧಾರಗಳು ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ದಸ್ತಗಿರಿ ಮಾಡಿದ್ದಾರೆ. ಸದ್ಯ ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಲ್ಪಿಸಲಾಗಿದೆ.

ಈ ದೌರ್ಜನ್ಯ ಪ್ರಕರಣವನ್ನು ಮಕ್ಕಳ ಆಯೋಗ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಆದರೆ, ತನಿಖೆಗೆ ಪೋಷಕರು ಸಹಕರಿಸಲು ಹಿಂಜರಿಯುತ್ತಿರುವುದು ಪೊಲೀಸರಿಗೆ ಹಿನ್ನಡೆಯಾಗಿದೆ. ಇಬ್ಬರು ಮಕ್ಕಳ ಪೋಷಕರು ಮಾತ್ರ ತಮ್ಮ ಎರಡೂವರೆ ವರ್ಷದ ಮಗು ಶೌಚಾಲಯಕ್ಕೆ ಹೋಗಲು ಹೆದರುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಉಳಿದ ಪೋಷಕರು ತಮ್ಮ ಮಕ್ಕಳಿಗೆ ಆದ ನೋವು ಅಥವಾ ದೌರ್ಜನ್ಯದ ಕುರಿತು ಯಾವುದೇ ವಿವರ ನೀಡುತ್ತಿಲ್ಲ. ಪೊಲೀಸರೇ ಪೋಷಕರಿರುವ ಸ್ಥಳಕ್ಕೆ ಹುಡುಕಿಕೊಂಡು ಹೋದರೂ ತನಿಖೆಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ, ನಗರದಲ್ಲಿರುವ ಡೇ ಕೇರ್ ಸೆಂಟರ್‌ಗಳ ಸುರಕ್ಷತೆಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್ ಕುಮಾರ್ ಅವರು ಮಹತ್ವದ ಸಲಹೆ ನೀಡಿದ್ದಾರೆ. ಡೇ ಕೇರ್ ಸೆಂಟರ್‌ಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಲೈವ್ ಲಿಂಕ್ ಅನ್ನು ಸಂಬಂಧಪಟ್ಟ ಪೋಷಕರ ಮೊಬೈಲ್‌ಗೆ ಸಂಪರ್ಕ ಕಲ್ಪಿಸಬೇಕು, ಇದರಿಂದ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಡೇ ಕೇರ್ ಸೆಂಟರ್‌ಗಳ ದತ್ತಾಂಶವನ್ನು ಕ್ರೋಡೀಕರಿಸಿ, ಸಿಸಿಟಿವಿ ಅಳವಡಿಕೆ ಹಾಗೂ ಪೋಷಕರ ಮೊಬೈಲ್‌ಗೆ ಅದರ ಸಂಪರ್ಕ ಕಲ್ಪಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಅಟ್ಟಿಕಾ ಗೋಲ್ಡ್ ಬಾಬುಗೆ ಹೈಕೋರ್ಟ್ ಶಾಕ್: ಸುಳ್ಳು ಪ್ರಮಾಣಪತ್ರ ಪ್ರಕರಣದಲ್ಲಿ ‘ಹೈ’ ನೋಟಿಸ್ ಜಾರಿ!

ಹೆಚ್ಚಿನ ಸುದ್ದಿ

Change Language »
error: Content is protected !!