ಚುನಾವಣೆ ಸಮೀಪಿಸುತ್ತಿದ್ದಂತೆ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ. ಅಕ್ರಮ ಹಣ, ಮದ್ಯ, ಸೀರೆ, ಕುಕ್ಕರ್ ಸೇರಿ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಸಂಗ್ರಹಿಸಿರುವ ಸಾಮಾಗ್ರಿಗಳು ಜಪ್ತಿಯಾಗುತ್ತಲೇ ಇದೆ. ಈ ನಡುವೆ, ಸಿಟಿ ರವಿ ಅವರ ಫೋಟೋ ಇರುವ ಕ್ಯಾಲೆಂಡರ್ ಹಾಗೂ ಮದ್ಯದ ಬಾಟಲಿಗಳು ಇರುವ ಕಾರ್ ಒಂದನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಘಟನೆ ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ ಬಳಿ ನಡೆದಿದೆ.
ಕಾರಿನಲ್ಲಿ ಮಾರಕಾಸ್ತ್ರ ಕೂಡಾ ಪತ್ತೆಯಾಗಿದ್ದು, ಆತಂಕವನ್ನೂ ಸೃಷ್ಟಿಸಿದೆ.
ಜೀಪ್ ಒಂದಕ್ಕೆ ಡಿಕ್ಕಿ ಹೊಡೆದ ಕಾರು ಪರಾರಿಯಾಗಲು ಯತ್ನಿಸುತ್ತಿದ್ದಂತೆ ಚಾಲಕನನ್ನು ಸ್ಥಳೀಯರು ಪೊಲೀಸರಿಗೆ ಹಿಡಿದೊಪ್ಪಿಸಿದ್ದು, ಕಾರಿನಲ್ಲಿ ಲಕ್ಷಾಂತರ ಮೌಲ್ಯದ ಮದ್ಯ, ಮಾರಕಾಸ್ತ್ರ ಹಾಗೂ ಸಿಟಿ ರವಿ ಅವರ ಭಾವಚಿತ್ರ ಇರುವ ಕ್ಯಾಲೆಂಡರ್ಗಳು ಪತ್ತೆಯಾಗಿದ್ದು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.
ಇದರಿಂದ ಆಕ್ರೋಶಗೊಂಡ ಸ್ಥಳೀಯರು ಸಿಟಿ ರವಿ ವಿರುದ್ಧ ಒಟಿ ರವಿ ಎಂದು ಘೋಷಣೆ ಕೂಗಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಎಐಟಿ ಸರ್ಕಲ್ ಬಳಿ ನೂರಾರು ಸ್ಥಳೀಯರು ಜಮಾಯಿಸಿದ್ದು, ಸ್ಥಳಕ್ಕೆ ಆಗಮಿಸಿದ ಚಿಕ್ಕಮಗಳೂರು ನಗರ ಪೋಲಿಸ್ ಠಾಣೆಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.