ಬೆಂಗಳೂರು: ದೇವನಹಳ್ಳಿ (Devanahalli) ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು (State Govt) ಕೊನೆಗೂ ಕೊಟ್ಟ ಮಾತಿನಂತೆ ಚನ್ನರಾಯಪಟ್ಟಣ (Channarayapatna) ಹೋಬಳಿಯ 13 ಗ್ರಾಮಗಳ 1777 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲು ನಿರ್ಧರಿಸಿದೆ.
ಇಂದು (ಡಿ.4) ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಈ ಮೀಟಿಂಗ್ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು. ದೇವನಹಳ್ಳಿ ವಿಶೇಷ ಆರ್ಥಿಕ ವಲಯಕ್ಕಾಗಿ 1777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಣಯಿಸಲಾಗಿತ್ತು. ಆದರೆ ರೈತರ ಪ್ರತಿಭಟನೆ ಹಾಗೂ ಸರ್ಕಾರದ ಜೊತೆಗಿನ ಅವರ ಸಮಾಲೋಚನೆ, ಬೇಡಿಕೆಗಳ ಹಿನ್ನೆಲೆಯಲ್ಲಿ 1777 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯಿದೆ ಕಲಂ 4ರಡಿಯಲ್ಲಿ ಅಧಿಸೂಚನೆ ಹೊರಡಿಸಿದ್ದನ್ನು ಕೈ ಬಿಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದರು.
ಇದನ್ನೂ ಓದಿ : ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಇಲ್ಲಿದೆ
ಪ್ರತಿಭಟನೆಯ ಹಿನ್ನೆಲೆ: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಸಂಬಂಧ 2022 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ವಿರೋಧಿಸಿ ಸ್ಥಳೀಯ ರೈತರು 2022 ರ ಎಪ್ರಿಲ್ 4 ರಿಂದ 1198 ದಿನಗಳ ಕಾಲ ನಿರಂತರ ಧರಣಿ ನಡೆಸಿದರು.
ಇತ್ತ 2023 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಂದಿನ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರೈತರ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವುದಾಗಿ ಭರವಸೆ ನೀಡಿದ್ದರು. ಆದರೂ 2025 ರ ಏಪ್ರಿಲ್‌ನಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಈ ವಿಚಾರ ತಿಳಿಯುತ್ತಿದ್ದಂತೆಯೇ ರೈತರು ಮತ್ತೆ ಪ್ರತಿಭಟನೆ ಆರಂಭಿಸಿದರು.
ಜೂ.24 ರಂದು 13 ಗ್ರಾಮಗಳ ಪೈಕಿ 3 ಗ್ರಾಮಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವುದಾಗಿ ಸರ್ಕಾರ ಮುಂದಿಟ್ಟ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದರು. ಜೂ.25 ರಂದು ರೈತರ ಹೋರಾಟವನ್ನು ಬೆಂಬಲಿಸಿ ಪ್ರಗತಿಪರ ಸಂಘಟನೆಗಳು ‘ದೇವನಹಳ್ಳಿ ಚಲೋ’ ಬೃಹತ್ ಪ್ರತಿಭಟನಾ ಜಾಥವು ಹಮ್ಮಿಕೊಂಡಿದ್ದವು. ಅಲ್ಲದೇ ಜೂ.27ರಂದು ನಗರದ ಸ್ವಾತಂತ್ರ್ಯ ಉದ್ಯಾನಕ್ಕೆ ಪ್ರತಿಭಟನೆ ಸ್ಥಳಾಂತರಗೊಂಡಿತು.
ಭರವಸೆ ಈಡೇರಿಸಿದ ಸಿಎಂ: ಈ ಎಲ್ಲಾ ಬೆಳವಣಿಗೆಗಳ ಬಳಿಕ ಜು.4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರೊಂದಿಗೆ ಸಮಾಲೋಚನೆ ನಡೆಸಿ, ಇನ್ನು 10 ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ಭರವಸೆ ನೀಡಿದ್ದರು. ಅದರಂತೆ ಜು.15ರಂದು ಮುಖ್ಯಮಂತ್ರಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವುದಾಗಿ ಪ್ರಕಟಿಸಿದ್ದರು. ಇಂದು ಸಚಿವ ಸಂಪುಟದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ದೇವನಹಳ್ಳಿ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.