ಹಾವೇರಿ : ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಬಿರುಸಿನಿಂದ ಆರಂಭವಾಗಿದ್ದು, ಮತದಾನಕ್ಕೂ ಮುನ್ನ ಮತದಾರರು ಮತಗಟ್ಟೆಯ ಬಾಗಿಲಿಗೆ ತೆಂಗಿನಕಾಯಿ ಒಡೆದು ಪೂಜೆ ಮಾಡಿರುವ ದೃಶ್ಯ ಕಂಡುಬಂತು.
ಖಾಜೇಖಾರ್ ಓಣಿಯ ತಿರ್ಕಪ್ಪ ಎಂಬ ಹಾಲುಮತದ ವೃದ್ಧ ಓರ್ವರು ಸೇರಿ ಅನೇಕ ಹಿರಿಯರು ಶಾಂತಿಯಿಂದ ಮತದಾನ ನಡೆಯಲಿ ಎಂದು ಪ್ರಾರ್ಥಿಸುವ ಮೂಲಕ ಮತಗಟ್ಟೆಗೆ ಹಣ್ಣು-ಕಾಯಿ ಹೂವು ಅರ್ಪಿಸಿ ಕರ್ಪೂರ ಹಚ್ಚಿ ಪೂಜೆ ಮಾಡಿ ಗಮನ ಸೆಳೆದರು.
ಮತದಾನವು ನಮ್ಮ ಹಕ್ಕಾಗಿದ್ದು, ನಮ್ಮೂರಿಗೆ ಒಳಿತಾಗಬೇಕು ಎಂದು ತಪ್ಪದೇ ಬಂದು ವೋಟ್ ಮಾಡಿದ್ದೇವೆ. ಹೀಗಾಗಿ ಅರ್ಹ ಮತದಾರರೂ ಬಂದು ಮತದಾನ ಮಾಡಿ. ರೈತರೂ ತಮ್ಮ ದೈನಂದಿನ ಕೃಷಿ ಚಟುವಟಿಕೆಗೆ ಹೋಗುವ ಮುನ್ನ ಮತದಾನ ಮಾಡಿಯೇ ತೆರಳಿ ಎಂದೂ ತಿರ್ಕಪ್ಪ ಮನವಿ ಮಾಡಿದರು. ಇನ್ನು ವ್ಹೀಲ್ ಚೇರ್ ನಲ್ಲಿ ಕೆಲ ವೃದ್ಧರು ಹುರುಪಿನಿಂದ ಬಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.