ರಾಮನಗರ : ಮಹಾಭಾರತದ ಅಭಿಮನ್ಯು ಯುದ್ಧದಲ್ಲಿ ಒಬ್ಬನೇ ಆಗಿದ್ದ, ಆದರೆ ಈ ಆಧುನಿಕ ಅಭಿಮನ್ಯುನಂತಿರುವ ನಿಖಿಲ್ ಒಂಟಿಯಲ್ಲ, ಅವರೊಂದಿಗೆ ಭೀಷ್ಮ-ದ್ರೋಣ, ಅರ್ಜುನ ಎಲ್ಲರೂ ಜತೆಯಲ್ಲಿಯೇ ಇದ್ದಾರೆ ಎಂದು “ಕೌರವ” ಖ್ಯಾತಿಯ ನಟ, ಮಾಜಿ ಸಚಿವ ಬಿ.ಸಿ.ಪಾಟೀಲ್ ಎನ್ಡಿಎ ಅಭ್ಯರ್ಥಿ ನಿಖಿಲ್ ಪರ ಅಬ್ಬರದ ಭಾಷಣ ಮಾಡಿದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಬೇವೂರುನಲ್ಲಿ ಇಂದು ಚುನಾವಣಾ ಪ್ರಚಾರದ ಭಾಷಣ ಮಾಡಿ, ಮಹಾಭಾರತದಲ್ಲಿ ಅಭಿಮನ್ಯು ಒಬ್ಬನೇ ಆಗಿದ್ದ. ಅವನು ಶೂರನೂ, ವೀರನೂ ಆಗಿದ್ದ. ಕುತಂತ್ರದಿಂದ ಅವನನ್ನು ಸೋಲಿಸಲಾಯಿತು. ಅರ್ಜುನನನ್ನು ಹೊರಗೆ ಮೋಸದಿಂದ ಕಳಿಸಿ ಕೊಲ್ಲಲಾಯಿತು.
ಆದರೆ, ಆಧುನಿಕ ಅಭಿಮನ್ಯುನಂತಿರುವ ನಿಖಿಲ್ ಈಗ ಒಂಟಿಯಲ್ಲ. ಅವರೊಂದಿಗೆ ಭೀಷ್ಮ, ದ್ರೋಣ, ಅರ್ಜುನ ಎಲ್ಲರೂ ಇದ್ದಾರೆ. ಭೀಷ್ಮ ಎಂದರೆ ದೇವೇಗೌಡರು, ದ್ರೋಣ ಎಂದರೆ ಯಡಿಯೂರಪ್ಪ, ಅರ್ಜುನ ಎಂದರೆ ಕುಮಾರಸ್ವಾಮಿ ಎಂದು ಮಹಾಭಾರತ ಕಥೆಯನ್ನು ಚನ್ನಪಟ್ಟಣದ ಮಿನಿ ಸಮರದ ಸಂದರ್ಭಕ್ಕೆ ಹೋಲಿಸಿ ಪಾಟೀಲರು ಬಣ್ಣಿಸಿದರು. ಇನ್ನು ನಿಖಿಲ್ ಈ ಬಾರಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.