ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ ಸ್ಪೋಟಗೊಂಡಿದ್ದ ಭಿನ್ನಮತಕ್ಕೆ ತಾತ್ಕಾಲಿಕವಾಗಿ ಮದ್ದೆರೆಯುವಲ್ಲಿ ಬಿಜೆಪಿ ಹೈಕಮಾಂಡ್ ಯಶಸ್ವಿಯಾದಂತೆ ಕಾಣುತ್ತಿದೆ. ಇಂದು ಯತ್ನಾಳ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಯತ್ನಾಳ್ ಕೂಡ ನಮ್ಮವರೇ ಎಂಬ ಮೃದು ಧೋರಣೆ ತೋರಿದ್ದಾರೆ. ಇದಕ್ಕೆ ಯತ್ನಾಳ್ ಕೂಡ ಹೌದು ಎಂದು ತಲೆಯಾಡಿಸಿದ್ದಾರೆ.
ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಯತ್ನಾಳ್ ಗೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ, ಇಂದು ದೆಹಲಿಯಲ್ಲಿ ಕೇಂದ್ರ ಶಿಸ್ತು ಸಮಿತಿಯ ಮುಂದೆ ಯತ್ನಾಳ್ ಹಾಜರಾಗಿದ್ದರು. ಈ ವೇಳೆ ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ಯತ್ನಾಳ್ ಗೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ.
ಇದೇ ವೇಳೆ ಈ ವಿಚಾರದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಯತ್ನಾಳ್ ಕೂಡ ನಮ್ಮವರೇ ಅವರು ಯಾವ ಕಾರಣಕ್ಕೆ ಅಸಮಾಧಾನಗೊಂಡು ಆ ರೀತಿ ಮಾತನಾಡಿದ್ದಾರೆ ಎಂಬುದು ತಿಳಿಯದು. ಆದರೆ ಸಮಸ್ಯೆಗಳು ಏನೇ ಇದ್ದರೂ ಹೈಕಮಾಂಡ್ ಬಗೆಹರಿಸಲಿದೆ ಎದುರೆದುರು ಕೂತು ಮಾತನಾಡಿದಾಗ ಎಲ್ಲಾ ಸಮಸ್ಯೆಯೂ ಬಗೆಹರಿಯುತ್ತದೆ ಎಂದು ಹೇಳಿದ್ದಾರೆ.
ಇಷ್ಟು ದಿನಗಳ ಕಾಲ ಬಿಎಸ್ ವೈ ವಿರುದ್ಧ ಕೆಂಡ ಕಾರುತ್ತಿದ್ದ ಯತ್ನಾಳ್ ಕೂಡ ಇಂದು ಅಚ್ಚರಿ ಎಂಬಂತೆ ಬಿ ಎಸ್ ವೈ ಹೇಳಿಕೆಯನ್ನ ಸ್ವಾಗತಿಸಿದ್ದಾರೆ. ಆ ಮೂಲಕ ಸದ್ಯಕ್ಕೆ ಅಸಮಾಧಾನ ಭಿನ್ನಮತವನ್ನ ಶಮನ ಮಾಡುವಲ್ಲಿ ಹೈಕಮಾಂಡ್ ಯಶಸ್ವಿಯಾದಂತೆ ಕಾಣುತ್ತಿದೆ.