ಬೆಂಗಳೂರು: ಒಳ ಮೀಸಲಾತಿ ಹಂಚಿಕೆ ವಿರೋಧಿಸಿ ಬಂಜಾರ ಸಮುದಾಯದವರು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಶಿಕಾರಿಪುರದ ತಮ್ಮ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿರುವುದರ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಪ್ರತಿಕ್ರಿಯೆ ನೀಡಿದ್ದಾರೆ.
ನಾನು ನಾಲ್ಕು ಬಾರಿ ಸಿಎಂ ಆಗಲು ಬಂಜಾರ ಸಮುದಾಯದವರು ಶ್ರಮಿಸಿದ್ದಾರೆ. ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದೆ ಎಂದು ಭಾವಿಸುತ್ತೇನೆ ಎಂದ ಬಿಎಸ್‍ವೈ, ನಾಳೆ ಅಥವಾ ನಾಡಿದ್ದು ಶಿವಮೊಗ್ಗಕ್ಕೆ ಹೋಗಿ ಬಂಜಾರ ಸಮುದಾಯದ ಹಿರಿಯರನ್ನು ಕರೆದು ಮಾತಾಡುತ್ತೇನೆ, ಅವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದಿದ್ದಾರೆ.
ಮನೆಮೇಲೆ ಏಕಾಏಕಿ ಕಲ್ಲು ತೂರಾಟ ನಡೆದಿರುವುದರಿಂದ ಸಹಜವಾಗಿ ನೋವಾಗಿದೆ ಎಂದ ಬಿಎಸ್‍ವೈ, ನಿಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಸಮಾಜಘಾತುಕ ಶಕ್ತಿಗಳ ಮಾತು ಕೇಳಬೇಡಿ ಎಂದು ಬಂಜಾರ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ನಿಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಎಸ್‍ವೈ, ನನ್ನನ್ನು ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ. ಯಾರಮೇಲೂ ದೂರು ನೀಡುವುದು ಸದ್ಯಕ್ಕೆ ಸರಿಯಲ್ಲ ಎನಿಸುತ್ತಿದೆ. ಬಂಜಾರ ಸಮುದಾಯದ ನ್ಯಾಯಯುತವಾಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇನೆ. ಜೊತೆಗೆ ಬಂಜಾರ ಸಮುದಾಯದವರು ಶಾಂತಿಯಿಂದ ವರ್ತಿಸಬೇಕು ಎಂದಿದ್ದಾರೆ.