ಲಂಡನ್: ಇರಾನ್ (Iran) ದೇಶದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಪಡೆಯಾದ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಅನ್ನು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಲು ಬ್ರಿಟನ್ (UK)ಸರ್ಕಾರ ನಿರ್ಧರಿಸಿದೆ. ಯುಕೆ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಅವರು ಈ ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಹೊಸ ಆದೇಶದ ಅನ್ವಯ, ಇನ್ನು ಮುಂದೆ ಬ್ರಿಟನ್‌ನಲ್ಲಿ ಇರಾನ್‌ನ ಈ ಮಿಲಿಟರಿ ಪಡೆಗೆ ಯಾವುದೇ ರೀತಿಯ ಬೆಂಬಲ ನೀಡುವುದು ಅಥವಾ ಅದರ ಪರವಾಗಿ ಗುರುತಿಸಿಕೊಳ್ಳುವುದು ಗಂಭೀರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಬ್ರಿಟನ್‌ನಲ್ಲಿ ಈ ಸಂಸ್ಥೆಯನ್ನು ನಿಷೇಧಿಸಬೇಕೇ ಬೇಡವೇ ಎಂಬ ಬಗ್ಗೆ ಕಳೆದ ಹಲವು ವರ್ಷಗಳಿಂದ ಸುದೀರ್ಘ ರಾಜಕೀಯ ಚರ್ಚೆಗಳು ನಡೆಯುತ್ತಿದ್ದು, ಅದಕ್ಕೀಗ ಅಧಿಕೃತ ಮುದ್ರೆ ಬಿದ್ದಿದೆ.
ಈ ನಿರ್ಧಾರಕ್ಕೆ ಕಾರಣವೇನು?
ಬ್ರಿಟನ್‌ನ ರಾಷ್ಟ್ರೀಯ ಭದ್ರತೆಗೆ ಇರಾನ್‌ನ ಈ ಪಡೆಗಳು ನೇರ ಬೆದರಿಕೆಯೊಡ್ಡುವ ಚಟುವಟಿಕೆಗಳಲ್ಲಿ ತೊಡಗಿವೆ ಎಂಬುದಕ್ಕೆ ಬಲವಾದ ಸಾಕ್ಷ್ಯಾಧಾರಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಬ್ರಿಟನ್ ಗೃಹ ಸಚಿವಾಲಯ ಈ ಕಠಿಣ ನಿರ್ಧಾರಕ್ಕೆ ಬಂದಿದೆ. ಇರಾನ್ ಪಡೆಗಳ ಜೊತೆಗೆ, ಬ್ರಿಟನ್‌ನಲ್ಲಿ ಯಹೂದಿ ಸಮುದಾಯದ ಮೇಲೆ ದಾಳಿ ನಡೆಸಿದ ಆರೋಪ ಹೊತ್ತಿರುವ ‘ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ದಿ ಕಂಪ್ಯಾನಿಯನ್ಸ್ ಆಫ್ ದಿ ರೈಟ್’ (IMCR) ಮತ್ತು ರಷ್ಯಾದ ಮಿಲಿಟರಿ ಗುಪ್ತಚರ ವಿಭಾಗದ ಅಂತರರಾಷ್ಟ್ರೀಯ ಶಾಖೆ ಎಂದು ಗುರುತಿಸಲ್ಪಟ್ಟಿರುವ ‘ರಷ್ಯನ್ ಫೆಡರೇಶನ್ ವಾಲಂಟೀರ್ ಕಾರ್ಪ್ಸ್’ (GRU) ಸಂಸ್ಥೆಗಳನ್ನು ಸಹ ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಲು ಸಚಿವರು ತೀರ್ಮಾನಿಸಿದ್ದಾರೆ.
ದೇಶದ ಹಿತಾಸಕ್ತಿಗೆ ಈ ನಿಷೇಧ ಮುಖ್ಯ ಎಂದ ಬ್ರಿಟನ್
ಬ್ರಿಟನ್ ನೆಲದಲ್ಲಿ ಇತ್ತೀಚೆಗೆ ಇರಾನ್ ಪ್ರಾಯೋಜಿತ ಸಂಚುಗಳು ಮತ್ತು ಬೆದರಿಕೆಗಳು ಹೆಚ್ಚಾಗುತ್ತಿರುವುದೇ ಈ ನಿಷೇಧಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಬ್ರಿಟನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಇರಾನ್ ಇಂಟರ್ನ್ಯಾಷನಲ್ ಟೆಲಿವಿಷನ್’ ವಾಹಿನಿಯ ಇಬ್ಬರು ಪತ್ರಕರ್ತರನ್ನು ಹತ್ಯೆ ಮಾಡಲು ರೂಪಿಸಲಾಗಿದ್ದ ಸಂಚು ಮತ್ತು ಬ್ರಿಟನ್‌ನ ಹಿತಾಸಕ್ತಿಗಳ ಮೇಲೆ ನಡೆದ ಸೈಬರ್ ದಾಳಿಗಳಲ್ಲಿ ಇರಾನ್ ಕೈವಾಡವಿರುವುದು ಪತ್ತೆಯಾಗಿತ್ತು. ಈ ಎಲ್ಲಾ ಆಧಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಗೃಹ ಕಾರ್ಯದರ್ಶಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ. ದೇಶದ ಭದ್ರತೆ, ಹಿತಾಸಕ್ತಿ ಹಾಗೂ ನಾಗರಿಕರ ರಕ್ಷಣೆಯ ದೃಷ್ಟಿಯಿಂದ ಈ ಮೂರು ಸಂಘಟನೆಗಳನ್ನು ವಿದೇಶಿ ಶಕ್ತಿಗಳ ಅಪಾಯಕಾರಿ ಚಟುವಟಿಕೆಗಳ ಪಟ್ಟಿಗೆ ಸೇರಿಸಿ ನಿಷೇಧಿಸುವುದು ಅತ್ಯಂತ ಅನಿವಾರ್ಯವಾಗಿತ್ತು ಎಂದು ಬ್ರಿಟನ್ ಸರ್ಕಾರ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.