ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರವಾಡದ ಕಾಂಗ್ರೆಸ್ (Congress) ಶಾಸಕ ವಿನಯ್ ಕುಲಕರ್ಣಿ (Vinay Kulkarni) ಜಾಮೀನು ಅರ್ಜಿ ವಿಚಾರಣೆ
ಮತ್ತೆ ಇಂದು ಹೈಕೋರ್ಟ್ನಲ್ಲಿ ಮುಂದುವರಿಯಿತು. ಸಿಬಿಐ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು ಪ್ರಬಲವಾಗಿ ವಾದಿಸಿದರು.
ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠದಿಂದ ವಿಚಾರಣೆ ನಡೆದಿದ್ದು, ಷರತ್ತನ್ನು ವಿನಯ್ ಉಲ್ಲಂಘಿಸಿದ್ದಾರೆ. ಸಾಕ್ಷಿ ವಿಚಾರಣೆ ಮುಗಿದಿದೆ ಎಂಬುವುದು ಜಾಮೀನು ಕೋರಲು ಆಧಾರವಾಗದು ಎಂದು ಪ್ರಸನ್ನಕುಮಾರ್ ಅವರು ವಾದ ಮುಂದುವರಿಸಿದರು.
ನಿರ್ದಿಷ್ಟ ಸಾಕ್ಷಿಯನ್ನು ಬೆದರಿಸಿ ಜಾಮೀನು ರದ್ದುಗೊಳಿಸಿದ ನಂತರ ಪರಿಸ್ಥಿತಿ ಬದಲಾಗಿದೆ ಎಂದು ಹೇಗೆ ಜಾಮೀನು ಕೋರಲಾಗುತ್ತದೆ. ಹೀಗಾಗಿ, ಅರ್ಜಿ ತಿರಸ್ಕರಿಸಬೇಕು. ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿರುವುದೇ ಅವರು ಜಾಮೀನಿಗೆ ಅರ್ಹರಲ್ಲ ಎಂಬುವುದಕ್ಕೆ ಆಧಾರವಾಗಿದೆ ಎಂದು ಪೀಠದ ಗಮನಕ್ಕೆ ತಂದರು.
ವಿನಯ್ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು, ಪ್ರಕರಣದಲ್ಲಿ ಇತರೆ ಆರೋಪಿಗಳು ಜಾಮೀನು ಪಡೆದಿದ್ದಾರೆ. ಹೀಗಿರುವಾಗ ನಮಗೇಕೆ ಈ ನಿಲುವು ಎಂದು ಪ್ರತಿವಾದಿಸಿದರು. ಇಂದಿನ ವಾದ-ಪ್ರತಿವಾದ ಆಲಿಸಿದ ಕೋರ್ಟ್ ನಾಳೆಗೆ (ಜ.9) ವಿಚಾರಣೆ ಮುಂದೂಡಿತು.
2025 ಡಿ.26ರ ವಿಚಾರಣೆಯಂದೂ ವಿನಯ್ ಕುಲಕರ್ಣಿಗೆ ಆಘಾತ!
ನ್ಯಾಯಮೂರ್ತಿ ಜಿ ಬಸವರಾಜ ಅವರ ರಜಾಕಾಲೀನ ಏಕಸದಸ್ಯ ಪೀಠದಲ್ಲಿ ಕಳೆದ ವರ್ಷದ ಡಿಸೆಂಬರ್ 26ರಂದು ನಡೆದಿದ್ದ ವಿಚಾರಣೆ ವೇಳೆ, ವಿನಯ್ ಕುಲಕರ್ಣಿ ಪರವಾಗಿ ವಾದಿಸಿದ್ದ ಸಿ ವಿ ನಾಗೇಶ್ ಅವರು, ಇಬ್ಬರು ಸಾಕ್ಷಿಗಳನ್ನು ವಿಚಾರಣೆ ನಡೆಸಿದರೆ ಮುಗಿಯುತ್ತದೆಯೇ ಎಂದು ಪೀಠವು ವಿನಯ್ ಪರ ವಕೀಲರಿಗೆ ಪ್ರಶ್ನಿಸಿತ್ತು. ಇಬ್ಬರ ವಿಚಾರಣೆ ನಡೆಯುವುದಕ್ಕೆ ಸಮಸ್ಯೆ ಇಲ್ಲ. ಆದರೆ, 18 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೇ ಆರೋಪಿಯಾಗಿದ್ದಾರೆ ಎಂದು ಸಿ.ವಿ.ನಾಗೇಶ್ ಪೀಠದ ಗಮನಕ್ಕೆ ತಂದಿದ್ದರು.
ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿನಯ್ ಕುಲಕರ್ಣಿಗೆ ಜಾಮೀನು ನಿರಾಕರಿಸಿತ್ತು.
ಏನಿದು ಕೇಸ್?
2016ರ ಜೂನ್ 15ರಂದು ಯೋಗೀಶ್ ಗೌಡರ ಹತ್ಯೆ ನಡೆದಿತ್ತು. ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದೆ. ವಿಶೇಷ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿತ್ತು. ಈ ಕೇಸ್ನಲ್ಲಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಕಳೆದ ವರ್ಷದ (2025) ಜೂನ್ 13 ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ. ಸದ್ಯ ಈ ಆರೋಪಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದನ್ನೂ ಓದಿ: ವಿವಸ್ತ್ರಗೊಳಿಸಿ ಹಲ್ಲೆ, ಸ್ವಯಂ ಪ್ರೇರಿತ ದೂರು ದಾಖಲಿಸಿದ ರಾಷ್ಟ್ರೀಯ ಮಹಿಳಾ ಆಯೋಗ