ಶಿವಮೊಗ್ಗ : ಸಿಇಟಿ ಪರೀಕ್ಷೆಯ ವೇಳೆ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತುಂಡರಿಸಿ ತೆಗೆದು ಹಾಕಿದ ಪ್ರಕರಣ ವಿವಾದ ಎಬ್ಬಿಸಿರುವ ಬೆನ್ನಲ್ಲೇ ಇದೇ ರೀತಿಯ ಮೂರನೇ ಪ್ರಕರಣವು ಬೆಳಕಿಗೆ ಬಂದಿದೆ. ಏ. 16 ರಂದು ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ನನ್ನ ಜನಿವಾರವನ್ನು ತುಂಡರಿಸಿ ಕಸದ ಬುಟ್ಟಿಗೆ ಎಸೆಯಲಾಯಿತು ಎಂದು ವಿದ್ಯಾರ್ಥಿಯೊಬ್ಬ ಬಹಿರಂಗಪಡಿಸಿದ್ದಾನೆ.
ಸಾಗರ ಪಟ್ಟಣದ ಹಳೇ ಇಕ್ಕೇರಿಯ ಬಿಎಚ್ ರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜಿನಲ್ಲಿ ಈ ಪ್ರಕರಣ ನಡೆದಿದೆ. ಪಾರ್ಥ. ಎಸ್.ರಾವ್ ಎಂಬ್ವಿದ್ಯಾರ ವಿದ್ಯಾರ್ಥಿಯ ಜನಿವಾರವನ್ನು ಪರೀಕ್ಷಾಕೇಂದ್ರ ಸಿಬ್ಬಂದಿ ಬಲವಂತವಾಗಿ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಜನಿವಾರವನ್ನು ತುಂಡರಿಸಿ ಕಸದ ಬುಟ್ಟಿಗೆ ಎಸೆಯಲಾಯಿತು. ಇದರಿಂದ ನನ್ನ ಮನಸಿಗೆ ತುಂಬಾ ಖೇದವಾಗಿದೆ. ಬೇಸರದಿಂದಲೇ ಪರೀಕ್ಷೆಯನ್ನು ಬರೆದೆ. ಆ ಕ್ಷಣದಲ್ಲಿ ಅದು ಅನಿವಾರ್ಯವಾಗಿತ್ತು .ಬಳಿಕ ಮನೆಗೆ ಬಂದು ಪೋಷಕರೊಂದಿಗೆ ಈ ವಿಷಯ ಹಂಚಿಕೊಂಡೆ ಎಂದಿದ್ದಾರೆ. ಈ ಕುರಿತು ವಿದ್ಯಾರ್ಥಿಯ ತಂದೆ ದೂರು ದಾಖಲಿಸಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದೆ.