ಬೆಂಗಳೂರು : ಸಿಲಿಕಾನ್ ಸಿಟಿ ಮಂದಿಗೆ ರಾಜ್ಯ ಸರ್ಕಾರವು ನೀರಿನ ದರ ಏರಿಕೆ ಕುರಿತು ಶಾಕ್ ನೀಡಲು ಮುಂದಾಗಿದ್ದು, ದರ ಏರಿಕೆಯ ಸುಳಿವನ್ನು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಈ ವಿಚಾರವನ್ನು ವಿಧಾನಸಭೆಯಲ್ಲಿ ಇಂದು ಪ್ರಸ್ತಾಪ ಮಾಡಿದರು.
7 ಪೈಸೆ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಬಂದಿದ್ದು, ಸದ್ಯಕ್ಕೆ ಒಂದು ಪೈಸೆಯನ್ನು ಹೆಚ್ಚಿಸುತ್ತೇವೆ. ಹೀಗಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಡಿಕೆಶಿ ಅವರು ಸದನದಲ್ಲಿ ಕೋರಿದರು. ಬಜೆಟ್ ಸಭೆಯಲ್ಲಿ ನೀರಿನ ದರ ಏರಿಕೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸುಳಿವು ನೀಡಿದರು.
ಬೆಂಗಳೂರು ಜಲಮಂಡಳಿ ವಾರ್ಷಿಕ ಒಂದು ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ದರ ಏರಿಕೆ ಅನಿವಾರ್ಯತೆ ಇದೆ. ಬೆಂಗಳೂರಿನ ಶಾಸಕರಿಗೆ ಜಲಮಂಡಳಿ ಅಧಿಕಾರಿಗಳು ದರ ಏರಿಕೆ ಅನಿವಾರ್ಯತೆ ಬಗ್ಗೆ ಮನವಿ ಮಾಡಿದ್ದಾರೆ. ಸಿಬ್ಬಂದಿ ಸಂಬಳಕ್ಕೆ ಹಣ ಇಲ್ಲ, ತೊಂದರೆ ಆಗುತ್ತಿದೆ ಎಂದು ಹೇಳಿದ್ದಾಗಿ ಕಳೆದೊಂದು ತಿಂಗಳ ಹಿಂದೆಯೇ ಡಿಕೆಶಿ ಅವರು ಹೇಳಿದ್ದರು.