ಬೆಂಗಳೂರು : ಮನೆಕೆಲಸಾದಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಎರಡನೇ ಬಾರಿಗೆ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಇಂದು ನಡೆಸಿದ್ದು, ವಿಚಾರಣೆಯನ್ನು ಜು.2ಕ್ಕೆ ಮುಂದೂಡಿ ಆದೇಶಿಸಿದೆ.
ನ್ಯಾಯಮೂರ್ತಿ ಎಸ್.ಆರ್ ಕೃಷ್ಣ ಕುಮಾರ್ ಏಕಸದಸ್ಯ ಪೀಠದ ಮುಂದೆ ರಾಜ್ಯ ಸರ್ಕಾರದ ಪರವಾಗಿ ವಾದ ಆರಂಭಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್, ‘ಸಾಮಾನ್ಯವಾಗಿ ವಿಚಾರಣಾಧೀನ ಕೈದಿಗಳು ಮೊದಲಿಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಿ ಆನಂತರ ಹೈಕೋರ್ಟ್‌ಗೆ ಬರಬೇಕು. ಆದರೆ, ಇಲ್ಲಿ ಅಂಥ ವಿಶೇಷ ಆಧಾರ ಏನಿದೆ? ಪ್ರಜ್ವಲ್ ನೇರವಾಗಿ ಹೈಕೋರ್ಟ್‌ಗೆ ಏತಕ್ಕೆ ಬಂದಿದ್ದಾರೆ? ಜಾಮೀನು ಅರ್ಜಿಯನ್ನು ನೇರವಾಗಿ ಏಕೆ ಹೈಕೋರ್ಟ್ ಪರಿಗಣಿಸಬಾರದು ಎಂಬುದಕ್ಕೆ ಹೈಕೋರ್ಟ್‌ನ ಸಮಗ್ರ ತೀರ್ಪಿದೆ. ಈ ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಬೇಕು’ ಎಂದರು.
‘ಪರಿಸ್ಥಿತಿ ಬದಲಾಗಿದೆ ಎಂದು ತೋರಿಸಲು ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯಕ್ಕೆ ಹೋಗಬೇಕೆ?’ ಎಂದು ಪೀಠ ಪ್ರಶ್ನಿಸಿತು. ‘ಆದರೆ ಪರಿಸ್ಥಿತಿ ಬದಲಾಗಿದೆ, ಅದಕ್ಕಾಗಿ ಜಾಮೀನು ನೀಡಬೇಕು ಎಂಬುದಕ್ಕೆ ಏನೇನೂ ಇಲ್ಲ. ಪ್ರಜ್ವಲ್ ನಡತೆಯನ್ನು ಆಧರಿಸಿದರೆ ಅರ್ಜಿ ಊರ್ಜಿತವಾಗುವುದಿಲ್ಲ. ಪ್ರಕರಣ ದಾಖಲಾಗುವ ಬೆನ್ನಿಗೇ ಪ್ರಜ್ವಲ್ ದೇಶ ತೊರೆದಿದ್ದರು. ಇಲ್ಲಿ ವಿಳಂಬದ ವಿಚಾರ ಎಲ್ಲಿದೆ?’ ಎಂದು ಪ್ರೊ. ಕುಮಾರ್ ಉತ್ತರಿಸಿದ್ರು.
‘ಕಳೆದ ಲೋಕಸಭಾ ಚುನಾವಣೆಗೂ ಮುನ್ನ ತಮ್ಮ ವಿಡಿಯೊಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪ್ರಜ್ವಲ್ ಮಾಧ್ಯಮಗಳ ವಿರುದ್ಧ ವಿಚಾರಣಾಧೀನ ನ್ಯಾಯಾಲಯದಲ್ಲಿ ಏಕಪಕ್ಷೀಯ ಪ್ರತಿಬಂಧಕಾದೇಶ ಪಡೆದುಕೊಂಡಿದ್ದರು. ಆನಂತರ ದೇಶ ತೊರೆದಿದ್ದರು. ವಿಚಾರಣೆ ವಿಳಂಬವಾಗಲು ಪ್ರಜ್ವಲ್ ನೇರ ಕಾರಣ. ಇದನ್ನು ವಿಚಾರಣಾಧೀನ ನ್ಯಾಯಾಲಯವು ತನ್ನ ಆದೇಶದಲ್ಲಿ ದಾಖಲಿಸಿದೆ ಎಂದು ಪ್ರೊ. ಕುಮಾರ್ ವಾದ ಮಂಡಿಸಿದರು. ಅದಾದ ಬೆನ್ನಲ್ಲೇ ಉಭಯ ಪಕ್ಷಕಾರರ ಸಮ್ಮತಿಯ ಮೇಲೆ ವಿಚಾರಣೆಯನ್ನು ಜುಲೈ 2ಕ್ಕೆ ನ್ಯಾಯಾಲಯ ಮುಂದೂಡಿದೆ.