ನವದೆಹಲಿ: ಸಂಸತ್ತಿನ (Parliament) ಮಳೆಗಾಲದ ಅಧಿವೇಶನವು (Monsoon Session) ಜುಲೈ 20 ರಿಂದ ಆರಂಭವಾಗಲಿದ್ದು, ಆಗಸ್ಟ್ 13 ರವರೆಗೆ ಮುಂದುವರಿಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಶಿಫಾರಸಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ ಬೆನ್ನಲ್ಲೇ ಸಂಸತ್ತಿನ ಉಭಯ ಸದನಗಳನ್ನು (ಲೋಕಸಭೆ ಮತ್ತು ರಾಜ್ಯಸಭೆ) ಕರೆಯುವ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಅರ್ಥಪೂರ್ಣ ಚರ್ಚೆಗೆ ಆಶಯ
ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರೂ ಆಗಿರುವ ಕಿರಣ್ ರಿಜಿಜು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. 2026ರ ಜುಲೈ 20 ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನವು ಆಗಸ್ಟ್ 13 ರವರೆಗೆ ನಡೆಯಲಿದೆ. ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಇಲಾಖಾವಾರು ವಿಷಯಗಳು ಹಾಗೂ ಪ್ರಮುಖ ಮಸೂದೆಗಳ ಕುರಿತು ಉಭಯ ಸದನಗಳಲ್ಲಿ ಅತ್ಯಂತ ಸಕಾರಾತ್ಮಕ, ಅರ್ಥಪೂರ್ಣ ಸಂವಾದಗಳು ಮತ್ತು ಚರ್ಚೆಗಳು ನಡೆದು ಸೂಕ್ತ ನಿರ್ಧಾರಗಳು ಹೊರಬೀಳಲಿವೆ ಎಂಬ ಆಶಯ ನಮ್ಮದಾಗಿದೆ, ಎಂದು ರಿಜಿಜು ಪೋಸ್ಟ್ ಮಾಡಿದ್ದಾರೆ.
On the recommendation of the Govt of India, Hon’ble President, Smt. Droupadi Murmu ji has approved the summoning of both the Houses of Parliament for the Monsoon Session 2026.
The Session will commence on 20 July, 2026 and continue till 13 August, 2026 for meaningful debate,… pic.twitter.com/TaEYH4F1cK— Kiren Rijiju (@KirenRijiju) July 4, 2026
ಕೇಂದ್ರ ಸಂಪುಟ ಪುನಾರಚನೆ ಕಸರತ್ತು ಮತ್ತಷ್ಟು ವಿಳಂಬ?
ಅಧಿವೇಶನದ ಅಧಿಕೃತ ದಿನಾಂಕಗಳು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದ ಕೇಂದ್ರ ಸಚಿವ ಸಂಪುಟ ಪುನಾರಚನೆಯ ಪ್ರಕ್ರಿಯೆಯು ಆಗಸ್ಟ್ ತಿಂಗಳ ಅಂತ್ಯದವರೆಗೆ ಮುಂದೂಡಲ್ಪಡುವುದು ಈಗ ಬಹುತೇಕ ಖಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ಆ ನಂತರ ಜುಲೈ 20ರಿಂದ ಸಂಸತ್ತಿನ ಅಧಿವೇಶನ ಆರಂಭವಾಗಲಿದೆ.
ಅಧಿವೇಶನದಲ್ಲಿ ಕೆಲವು ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯುವುದು ಸರ್ಕಾರದ ಮೊದಲ ಆದ್ಯತೆಯಾಗಿರುವುದರಿಂದ, ಈ ಮಳೆಗಾಲದ ಅಧಿವೇಶನ ಸಂಪೂರ್ಣವಾಗಿ ಮುಗಿದ ನಂತರವೇ ಪ್ರಧಾನಿಯವರು ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಕೈ ಹಾಕಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಚುನಾವಣಾ ಆಯೋಗ ಕತ್ತೆ ಕಾಯ್ತಾ ಇದೆಯಾ? ಎಸ್‌ಐಆರ್ ಲೋಪ ಕುರಿತು ಪ್ರಿಯಾಂಕ್ ಖರ್ಗೆ ಕಿಡಿ