ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ (Karnataka Government) 22 ಮಸೂದೆಗಳ ಪೈಕಿ 19 ಮಸೂದೆಗಳಿಗೆ ಮಾತ್ರ ರಾಜ್ಯಪಾಲ (Governor) ಥಾವರ್ ಚಂದ್ ಗೆಹ್ಲೋಟ್ ಅವರು ಸಹಿ ಮಾಡಿದ್ದಾರೆ.
ಸ್ಪಷ್ಟನೆ ಕೋರಿ ಕೆಲ ಮಸೂದೆಗಳನ್ನು ಸರ್ಕಾರಕ್ಕೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಪ್ರಮುಖವಾಗಿ ದ್ವೇಷ ಭಾಷಣ ತಡೆ ವಿಧೇಯಕಕ್ಕೆ ರಾಜ್ಯಪಾಲರು ಸಹಿ ಮಾಡಿಲ್ಲ ಎಂದು ತಿಳಿದುಬಂದಿದೆ.
ಕಾನೂನು ತಜ್ಞರ ಜೊತೆಗೆ ಚರ್ಚೆಗೆ ರಾಜ್ಯಪಾಲರು ನಿರ್ಧರಿಸಿ ಈ ಮಸೂದೆಗಳಿಗೆ ಸಹಿ ಹಾಕದೆ ಸರ್ಕಾರಕ್ಕೆ ಕಳುಹಿಸಿದ್ದಾರೆ. ಇನ್ನು ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮಸೂದೆ, ಪರಿಶಿಷ್ಟ ವರ್ಗಗಳ ಕುರಿತಾದ ವಿಧೇಯಕವನ್ನು ಗವರ್ನರ್ ವಾಪಸ್ ಕಳುಹಿಸಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಗೊಂಡಿದ್ದ ದ್ವೇಷ ಭಾಷಣ ತಡೆ ವಿಧೇಯಕ!
ಕಳೆದ ವರ್ಷ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರವಾಗಿತ್ತು. ಕರ್ನಾಟಕ ವಿಧಾನಸಭೆಯಲ್ಲಿ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ ಮಾಡಲಾ ಯಿತು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಬಿಲ್ ಅಂಗೀಕಾರವಾಗುತ್ತಿದ್ದಂತೆ, ಬಿಲ್ ಪ್ರತಿಯನ್ನು ಹರಿದು ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.
ದ್ವೇಷ ಭಾಷಣ ಎಂದರೆ ಏನು?
‘ದ್ವೇಷ ಭಾಷಣ’ ಎಂದರೇನು ಎಂದು ನೋಡುವುದಾದರೆ, ಧರ್ಮ, ಜನಾಂಗ, ಜಾತಿಗೆ ಹಾನಿ ಮಾಡುವಂತಹ ಮಾತು, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ನಿವಾಸ, ಅಂಗವೈಕಲ್ಯ, ಬುಡಕಟ್ಟುಗಳಿಗೆ ಮಾತಿನಿಂದಲೇ ಹಾನಿ ಮಾಡುವುದು, ದ್ವೇಷಕ್ಕೆ ಪ್ರೇರೇಪಣೆ ನೀಡುವಂತೆ ಮಾತಾಡುವುದು ಅಪರಾಧ ಎನಿಸಿಕೊಳ್ಳುತ್ತದೆ. ನಿರ್ದಿಷ್ಟ ಗುಂಪಿನ ವಿರುದ್ಧ ಆಕ್ರಮಣಕಾರಿ ಭಾಷೆ ಬಳಕೆ ಮಾಡಿ, ದ್ವೇಷವನ್ನು ಪ್ರಚಾರ ಮಾಡುವುದು ಕೂಡ ಅಪರಾಧ ಎನಿಸಿಕೊಳ್ಳುತ್ತದೆ.
ದ್ವೇಷ ಭಾಷಣ ಮಾಡಿದರೆ 7 ವರ್ಷ ಜೈಲು ಶಿಕ್ಷೆ:
ಈ ನೂತನ ಮಸೂದೆಯಡಿಡಿ ದ್ವೇಷ ಭಾಷಣ ಮಾಡಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. 50 ಸಾವಿರ ದಂಡವೂ ವಿಧಿಸಬಹುದು. ಒಂದು ವೇಳೆ ಮತ್ತೊಮ್ಮೆ ದ್ವೇಷ ಭಾಷಣ ಮಾಡಿದರೆ, ಎರಡು ವರ್ಷದಿಂದ ಹತ್ತು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. 1 ಲಕ್ಷ ದಂಡವನ್ನೂ ಹಾಕಬಹುದು. ಅಲ್ಲದೇ ದ್ವೇಷ ಭಾಷಣದಿಂದ ನೊಂದ ವ್ಯಕ್ತಿಗೆ ಪರಿಹಾರ ನೀಡಬೇಕು. ದ್ವೇಷ ಭಾಷಣ ಮಾಡಿರಬಹುದಾದ ಮಾಹಿತಿ ಪಡೆದು ಪೊಲೀಸರೇ ಕೇಸ್ ದಾಖಲಿಸಿಕೊಳ್ಳಲು ಅವಕಾಶವಿದೆ. ಇದಿಷ್ಟೇ ಅಲ್ಲ ದ್ವೇಷ ಭಾಷಣದ ಸುದ್ದಿ ಪ್ರಸಾರ ಆಗದಂತೆ ನಿರ್ಬಂಧಿಸುವ ಅಧಿಕಾರವೂ ಪೊಲೀಸರಿಗೆ ನೀಡಲಾಗುತ್ತದೆ.
ದ್ವೇಷ ಭಾಷಣ ತಡೆ ಬಿಲ್ ಬಗ್ಗೆ ಬಿಜೆಪಿ ವಿರೋಧ!
ಈ ದ್ವೇಷ ಭಾಷಣ ತಡೆ ಬಿಲ್ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದ್ದ ಸಚಿವ ಭೈರತಿ ಸುರೇಶ್ ‘ಈ ಬಿಲ್‌ನಿಂದ ಯಾಕೆ ಇಷ್ಟೊಂದು ಭಯ ಪಡುತ್ತೀರಿ ಎಂದು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದ್ದರು. ಬಿಜೆಪಿ ಸದಸ್ಯರು ಬಿಲ್‌ಗೆ ವಿರೋಧ ವ್ಯಕ್ತಪಡಿಸಿ, ‘ಈ ಬಿಲ್‌ನಿಂದ ಪತ್ರಕರ್ತರು ನೆಮ್ಮದಿಯಾಗಿ ಇರಲಾಗದು’ ಎಂದು ಆತಂಕ ವ್ಯಕ್ತಪಡಿಸಿದ್ದರು. ಪ್ರತಿಪಕ್ಷ ನಾಯಕ ಆರ್ ಅಶೋಕ್ ಬಿಲ್ ಪ್ರತಿಯನ್ನು ಹರಿದು ಬಿಸಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ದ್ವೇಷ ಭಾಷಣ ವಿರೋಧ ಕಾಯ್ದೆ ವಿರುದ್ಧ ಆಕ್ರೋಶ – ಬಿಜೆಪಿ ಪ್ರತಿಭಟನೆ.!