ಬೆಂಗಳೂರು : ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ಚರ್ಚಿಸಲು ಇಂದು ಜೆ.ಪಿ.ಭವನದಲ್ಲಿ ನಡೆದ ಜೆಡಿಎಸ್ ನಾಯಕರ ಸಭೆ ಮುಕ್ತಾಯವಾಗಿದ್ದು, ಚುನಾವಣೆ ಮೂಲಕ ರಾಜ್ಯಾಧ್ಯಕ್ಷರ ಆಯ್ಕೆ ಮಾಡುವ ಕುರಿತು ನಿರ್ಧರಿಸಲಾಗಿದೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಮಾರ್ಚ್ನಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತಾಗಿ ಚುನಾವಣೆ ನಡೆಸಲು ದಳಪತಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.
ಇನ್ನು ಎಂಎಲ್ಸಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಮೂರು ಹಂತದ ಚುನಾವಣೆ ನಡೆಯಲಿದ್ದು, ಸಂಪೂರ್ಣ ಉಸ್ತುವಾರಿಯನ್ನು ತಿಪ್ಪೇಸ್ವಾಮಿ ಅವರೇ ವಹಿಸಲಿದ್ದಾರೆ. ಚುನಾವಣೆಗೆ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಜ.20ರವರೆಗೆ ಸದಸ್ಯತ್ವ ನೋಂದಣಿ ಚುರುಕುಗೊಳಿಸುವಂತೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರನ್ನೇ ನೇಮಿಸಿ ಎಂದು ಇಂದಿನ ಸಭೆಯಲ್ಲಿ ಬಹುಪಾಲು ಮುಖಂಡರು, ಶಾಸಕರು, ಮಾಜಿ ಶಾಸಕರು ಒಲವು ತೋರಿದರು ಎಂಬ ಮಾಹಿತಿ ಲಭ್ಯವಾಗಿದೆ.