ವಾಷಿಂಗ್ಟನ್: ಇರಾನ್ (Iran) ಮತ್ತು ಅಮೆರಿಕ (America) ನಡುವಿನ ಶಾಂತಿ ಮಾತುಕತೆ ವಿಫಲವಾದ ಬಳಿಕ ಸಂಘರ್ಷ ತಾರಕಕ್ಕೇರಿದ್ದು, ಇರಾನ್ ಬಂದರುಗಳ ಮೇಲೆ ಅಮೆರಿಕ ನೌಕಾ ದಿಗ್ಬಂಧನ ಹೇರಿದೆ ಎಂದು ಯುಸ್ ತಾನೇ ಘೋಷಿಸಿಕೊಂಡಿದೆ. ಇದರೊಂದಿಗೆ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಮೆರಿಕ ಹೇರಿರುವ ಹಾರ್ಮುಜ್ ಜಲಸಂಧಿ ದಿಗ್ಬಂಧನವನ್ನು ಮೀರಿ ಬರಲು ಪ್ರಯತ್ನಿಸಿದರೆ, ಇರಾನ್‌ನ ನೌಕೆಗಳನ್ನು ತಕ್ಷಣವೇ ನಾಶಪಡಿಸಲಾಗುವುದು. ಇದು ಖಚಿತ ಎಂದು ಗುಡುಗಿದ್ದಾರೆ.
ತಮ್ಮ ‘ಟ್ರುತ್ ಸೋಶಿಯಲ್’ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟ್ರಂಪ್, ಇರಾನ್‌ನ ನೌಕಾ ಶಕ್ತಿ ಈಗಾಗಲೇ ಕುಸಿದಿದೆ. ಇರಾನ್‌ನ ನೌಕಾಪಡೆಯ ಬಹುತೇಕ ಭಾಗ ಸಮುದ್ರದ ತಳ ಸೇರಿದೆ. ಒಟ್ಟು 158 ನೌಕೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
‘ಫಾಸ್ಟ್ ಅಟ್ಯಾಕ್’ ನೌಕೆಗಳ ಮೇಲೆ ಕಣ್ಣು:
ಇದುವರೆಗೆ ಇರಾನ್‌ನ ಸಣ್ಣ ಪ್ರಮಾಣದ ‘ವೇಗದ ದಾಳಿ ನೌಕೆಗಳನ್ನು’ ಗುರಿಯಾಗಿಸಿಕೊಂಡಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಈ ನೌಕೆಗಳು ನಮಗೆ ದೊಡ್ಡ ಮಟ್ಟದ ಬೆದರಿಕೆ ಎಂದು ನಾವು ಈ ಹಿಂದೆ ಭಾವಿಸಿರಲಿಲ್ಲ. ಹಾಗಾಗಿ ಅವುಗಳ ಮೇಲೆ ದಾಳಿ ಮಾಡಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕ-ಇರಾನ್ ಸಂಘರ್ಷಕ್ಕೆ ಪುಟಿನ್ ಮಧ್ಯಸ್ಥಿಕೆ, ಶಾಂತಿ ಸ್ಥಾಪನೆಗೆ ರಷ್ಯಾ ಆಫರ್
ದಿಗ್ಬಂಧನ ಉಲ್ಲಂಘಿಸಿದರೆ ಸುಮ್ಮನೇ ಬಿಡಲ್ಲ:
ಅಮೆರಿಕ ಹೇರಿರುವ ನೌಕಾ ದಿಗ್ಬಂಧನವನ್ನು ಸವಾಲಾಗಿ ಸ್ವೀಕರಿಸದಂತೆ ಇರಾನ್‌ಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. “ನಮ್ಮ ದಿಗ್ಬಂಧನದ ಹತ್ತಿರ ಯಾವುದೇ ಇರಾನಿ ನೌಕೆಗಳು ಸುಳಿದರೂ ಅವುಗಳನ್ನು ತಕ್ಷಣವೇ ಹೊಡೆದು ಹಾಕಲಾಗುವುದು. ಸಮುದ್ರದಲ್ಲಿ ಮಾದಕ ದ್ರವ್ಯ ಸಾಗಣೆದಾರರ ವಿರುದ್ಧ ನಾವು ಯಾವ ರೀತಿಯ ‘ಕಿಲ್ ಸಿಸ್ಟಮ್’ ಬಳಸುತ್ತೇವೆಯೋ, ಅದೇ ತಂತ್ರಜ್ಞಾನವನ್ನು ಇಲ್ಲೂ ಬಳಸುತ್ತೇವೆ. ಇದು ಅತ್ಯಂತ ವೇಗ ಮತ್ತು ಕ್ರೂರವಾಗಿರಲಿದೆ” ಎಂದು ನೇರ ಎಚ್ಚರಿಕೆ ರವಾನಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಮುದ್ರ ಮಾರ್ಗದ ಮೂಲಕ ಅಮೆರಿಕಕ್ಕೆ ಸಾಗಣೆಯಾಗುತ್ತಿದ್ದ ಮಾದಕ ದ್ರವ್ಯ ತಡೆಗಟ್ಟುವಲ್ಲಿ ತಮ್ಮ ಸರ್ಕಾರ ಸಾಧಿಸಿರುವ ಯಶಸ್ಸನ್ನು ಟ್ರಂಪ್ ಉಲ್ಲೇಖಿಸಿದ್ದಾರೆ. ಸಾಗರ ಮಾರ್ಗದ ಮೂಲಕ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಶೇ. 98.2 ರಷ್ಟು ಡ್ರಗ್ಸ್ ಸಾಗಾಟವನ್ನು ಈಗ ನಿಲ್ಲಿಸಲಾಗಿದೆ ಎಂದು ಟ್ರಂಪ್ ವಿವರಿಸಿದ್ದಾರೆ.
ಇದನ್ನೂ ಓದಿ: ನಮ್ಮ ಹತ್ರ ಇರುವ ತೈಲವನ್ನ ಯಾವುದೇ ದೇಶಕ್ಕೂ ಮಾರಾಟ ಮಾಡಲು ಸಿದ್ದ ಎಂದ ಇರಾನ್
