ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಗಣ್ಯರ ಸಮ್ಮುಖದಲ್ಲಿ ಪ್ರಮಾಣ ವಚನಸ್ವೀಕರಿಸಿದ ಬೆನ್ನಲ್ಲೇ, ಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಮಾಡಿದ ಮೊದಲ ಪೋಸ್ಟ್ ಇಡೀ ರಾಜ್ಯದ ಗಮನ ಸೆಳೆದಿದೆ. ಸಿಎಂ ಪಟ್ಟಕ್ಕೇರಿದ ಸಂಭ್ರಮದ ಕ್ಷಣದಲ್ಲಿ ತಮ್ಮ ಪ್ರಮಾಣ ವಚನ ಸ್ವೀಕಾರದ ಫೋಟೋಗಳನ್ನು ಹಂಚಿಕೊಂಡಿರುವ ಡಿಕೆಶಿ, ಅದಕ್ಕೆ ಹಿಂದೂ (Breaking) ಧರ್ಮದ ಪವಿತ್ರ ಗ್ರಂಥ ಶ್ರೀಮದ್ಭಗವದ್ಗೀತೆಯ ಅತ್ಯಂತ ಪ್ರಸಿದ್ಧ ಶ್ಲೋಕವೊಂದನ್ನು ಬರೆದುಕೊಂಡಿದ್ದಾರೆ.
“ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ ಮಾ ತೇ ಸಂಗೋಸ್ತ್ವ ಕರ್ಮಣಿ ||
ಡಿ.ಕೆ. ಶಿವಕುಮಾರ್ ಅವರು ಉಲ್ಲೇಖಿಸಿರುವ ಈ ಸಾಲುಗಳು ಭಗವದ್ಗೀತೆಯ ಎರಡನೇ ಅಧ್ಯಾಯದ 47ನೇ ಶ್ಲೋಕವಾಗಿದ್ದು, ಮಹಾಭಾರತದ ಯುದ್ಧಭೂಮಿಯಲ್ಲಿ ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಕರ್ಮಯೋಗದ ಪರಮ ಸತ್ಯವಾಗಿದೆ. ನಿನ್ನ ಕರ್ತವ್ಯ ಅಥವಾ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದರಲ್ಲಿ ಮಾತ್ರ ನಿನಗೆ ಅಧಿಕಾರವಿದೆಯೇ ಹೊರತು, ಅದರ ಫಲಿತಾಂಶ (Success ಅಥವಾ Failure) ಏನಾಗಬಹುದು ಎಂಬುದರ ಮೇಲೆ ನಿನ್ನ ಯಾವುದೇ ನಿಯಂತ್ರಣ ಇರುವುದಿಲ್ಲ.
ನೀನು ಮಾಡುವ ಕೆಲಸದ ಪ್ರತಿಫಲಕ್ಕೆ ನೀನೇ ಕಾರಣ ಎಂದು ಎಂದಿಗೂ ಅಹಂಕಾರ ಪಡಬೇಡ ಅಥವಾ ಫಲ ಸಿಗಲಿಲ್ಲ ಎಂದು ನಿರಾಶನಾಗಬೇಡಿ. ಫಲ ಸಿಗುವುದಿಲ್ಲ ಎಂಬ ಕಾರಣಕ್ಕೆ ನೀನು ಕೆಲಸ ಮಾಡುವುದನ್ನೇ ನಿಲ್ಲಿಸಬಾರದು, ಅಂದರೆ ನಿಷ್ಕ್ರಿಯತೆ ಅಥವಾ ಸೋಮಾರಿತನದಲ್ಲಿ ನಿನಗೆ ಎಂದಿಗೂ ಆಸಕ್ತಿ ಇರಬಾರದು. ರಾಜಕೀಯದಲ್ಲಿ ಏನೇ ಅಡ್ಡಿ-ಆತಂಕಗಳು ಬಂದರೂ ಧೃತಿಗೆಡದೆ ತಟಸ್ಥವಾಗಿ ತಮ್ಮ ಕೆಲಸ ಮಾಡುತ್ತಾ ಬಂದಿದ್ದಕ್ಕೇ ಇಂದು ಸಿಎಂ ಪಟ್ಟ ಸಿಕ್ಕಿದೆ ಎಂಬ ಸಂದೇಶವನ್ನು ಡಿಕೆಶಿ ಈ ಶ್ಲೋಕದ ಮೂಲಕ ರವಾನಿಸಿದ್ದಾರೆ.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ ಮಾ ತೇ ಸಂಗೋಸ್ತ್ವ ಕರ್ಮಣಿ || pic.twitter.com/VElVFR1U3M— DK Shivakumar (@DKShivakumar) June 3, 2026
ಸಿಎಂ ಕಚೇರಿಯಲ್ಲಿ ನೊಣವಿನಕೆರೆ ಅಜ್ಜಯ್ಯನ ಹೆಜ್ಜೆ
ಡಿ.ಕೆ. ಶಿವಕುಮಾರ್ ಅವರ ಬದುಕಿನಲ್ಲಿ ತುಮಕೂರು ಜಿಲ್ಲೆಯ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಅಜ್ಜಯ್ಯನವರ ಆಶೀರ್ವಾದ ದೊಡ್ಡ ಮಟ್ಟದಲ್ಲಿದೆ. ತಮ್ಮ ಜೀವನದ ಪ್ರತಿಯೊಂದು ಪ್ರಮುಖ ಹೆಜ್ಜೆಯನ್ನೂ ಅಜ್ಜಯ್ಯನ ಅಪ್ಪಣೆ ಪಡೆದೇ ಇಡುವ ಡಿಕೆಶಿ, ತಮಗೆ ಸಿಎಂ ಸ್ಥಾನ ಸಿಕ್ಕಿರುವುದೂ ಸಹ ಅಜ್ಜಯ್ಯನ ಕೃಪಾಕಟಾಕ್ಷದಿಂದಲೇ ಎಂದು ಬಲವಾಗಿ ನಂಬಿದ್ದಾರೆ. ಹೀಗಾಗಿಯೇ, ಲೋಕಭವನದಲ್ಲಿ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತಿದ್ದ ಮುನ್ನವೇ, ನೊಣವಿನಕೆರೆ ಶ್ರೀಗಳು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ಕಚೇರಿಗೆ ಭೇಟಿ ನೀಡಿದ್ದರು. ವಿಧಾನಸೌಧದ ಮೆಟ್ಟಿಲು ಹತ್ತುತ್ತಲೇ ಮಂತ್ರಾಕ್ಷತೆ ಹಾಕುತ್ತಾ ಸಾಗಿದ ಶ್ರೀಗಳು, ಸಿಎಂ ಕಚೇರಿಯನ್ನು ಪ್ರವೇಶಿಸಿ ಅಲ್ಲಿ ಧನಾತ್ಮಕ ಶಕ್ತಿ ನೆಲೆಸುವಂತೆ ಆಶೀರ್ವದಿಸಿದರು. ಶ್ರೀಗಳು ಕಚೇರಿಯನ್ನು ಪವಿತ್ರಗೊಳಿಸಿ ನಿರ್ಗಮಿಸಿದ ನಂತರವಷ್ಟೇ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಚೇರಿಯೊಳಗೆ ಅಧಿಕೃತವಾಗಿ ಪ್ರವೇಶ ಮಾಡಿದರು.
ಶಿಡ್ಲಘಟ್ಟದಲ್ಲಿ ಭರ್ಜರಿ ಬಿರಿಯಾನಿ ಊಟ
ಡಿಕೆಶಿ ಮುಖ್ಯಮಂತ್ರಿಯಾಗುತ್ತಿದ್ದಂತೆ ಇಡೀ ರಾಜ್ಯಾದ್ಯಂತ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ರಾಜ್ಯದ ಮೂಲೆ ಮೂಲೆಗಳಲ್ಲೂ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಇನ್ನು ಸಾರ್ವಜನಿಕರಿಗಾಗಿ ರಾಜ್ಯದ ಬರೋಬ್ಬರಿ 230 ಪ್ರಮುಖ ಬಸ್ ನಿಲ್ದಾಣಗಳಲ್ಲಿ ಡಿಕೆಶಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರಕ್ಕೆ (Live Telecast) ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷವಾಗಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬೃಹತ್ ಎಲ್‌ಇಡಿ (LED) ಪರದೆಯನ್ನು ಅಳವಡಿಸಲಾಗಿತ್ತು. ಅಲ್ಲಿ ನೆರೆದಿದ್ದ ನೂರಾರು ಪ್ರಯಾಣಿಕರು ಹಾಗೂ ಸಾರ್ವಜನಿಕರು ಡಿಕೆಶಿ ಅವರ ಪಟ್ಟಾಭಿಷೇಕವನ್ನು ಕಣ್ಣುಂಬಿಕೊಂಡರು. ಇದೇ ಖುಷಿಯಲ್ಲಿ ಅಭಿಮಾನಿ ಬಳಗದಿಂದ ಅಲ್ಲಿಗೆ ಬಂದಿದ್ದ ಸಾರ್ವಜನಿಕರೆಲ್ಲರಿಗೂ ಭರ್ಜರಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಇಡೀ ದಿನ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು