ಕಲಬುರಗಿ/ಬೆಳಗಾವಿ: ರಾಜ್ಯದಲ್ಲಿ ಬಾಂಬ್ ಬೆದರಿಕೆಗಳು ಹೆಚ್ಚುತ್ತಿದೆ. ಕಲಬುರಗಿ (Kalaburagi) ಹಾಗೂ ಬೆಳಗಾವಿಯ (Belagavi) ಜಿಲ್ಲಾ ನ್ಯಾಯಾಲಯಗಳಿಗೆ ಮಂಗಳವಾರ ಬೆಳಗ್ಗೆ ಬಾಂಬ್ ಬೆದರಿಕೆ (Bomb Threat) ಇಮೇಲ್ ಕಳುಹಿಸಲಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯಗಳ ಆವರಣವನ್ನು ಖಾಲಿ ಮಾಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆಯಾ ಜಿಲ್ಲಾ ನ್ಯಾಯಾಲಯಗಳ ಅಧಿಕೃತ ಇಮೇಲ್ ಐಡಿಗಳಿಗೆ ಬೆದರಿಕೆ ಸಂದೇಶ ಬಂದ ತಕ್ಷಣವೇ ವಕೀಲರು, ದಾವೆದಾರರು ಹಾಗೂ ನ್ಯಾಯಾಲಯದ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಭದ್ರತೆಯನ್ನು ಹೆಚ್ಚಿಸಿ, ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಯಿತು.
ಬಾಂಬ್ ಪತ್ತೆ ಹಾಗೂ ವಿಲೇವಾರಿ ದಳ (BDDS) ಮತ್ತು ಶ್ವಾನ ದಳದ ಸಹಾಯದಿಂದ ಪೊಲೀಸ್ ತಂಡಗಳು ಎರಡೂ ಜಿಲ್ಲೆಗಳ ನ್ಯಾಯಾಲಯ ಸಂಕೀರ್ಣಗಳಲ್ಲಿ ಸುದೀರ್ಘ ಹಾಗೂ ತೀವ್ರ ಶೋಧ ಕಾರ್ಯಾಚರಣೆ ನಡೆಸಿದವು. ಶೋಧದ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವ್ಯಕ್ತಿಯೊಬ್ಬರು ಇಮೇಲ್ ಕಳುಹಿಸಿರುವುದಾಗಿ ತಿಳಿದುಬಂದಿದ್ದು, ಪ್ರಾಥಮಿಕ ತನಿಖೆಯ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇಮೇಲ್‌ನ ಮೂಲವನ್ನು ಪತ್ತೆಹಚ್ಚಿ, ಇದರ ಹಿಂದೆ ಇರುವವರನ್ನು ಗುರುತಿಸಲು ಸೈಬರ್ ಕ್ರೈಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ಬಾಂಬ್ ಬೆದರಿಕೆ
ಸಿಲಿಕಾನ್ ಸಿಟಿಯಲ್ಲಿರುವ ಸಿಟಿ ಸಿವಿಲ್ ಕೋರ್ಟಿಗೆ (City Civil Court) ಇ-ಮೇಲ್ (E-Mail) ಮೂಲಕ ಬಾಂಬ್ ಬೆದರಿಕೆಯನ್ನು (Bomb Threat) ಹಾಕಲಾಗಿದೆ. ವಿಷಯ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಬೆಂಗಳೂರಿನ ಹೃದಯ ಭಾಗದ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯಲ್ಲಿನ ಸಿಟಿ ಸಿವಿಲ್ ಕೋರ್ಟಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯನ್ನು ಹಾಕಲಾಗಿದೆ. ತಮಿಳು ಭಾಷೆಯಲ್ಲಿ ಇ-ಮೇಲ್ ನಲ್ಲಿ ಬಾಂಬ್ ಬೆದರಿಕೆಯನ್ನು ಹಾಕಿರುವುದಾಗಿ ಹೇಳಲಾಗುತ್ತಿದೆ.
ಈ ವಿಷಯವನ್ನು ಪೊಲೀಸರಿಗೆ ಕೋರ್ಟ್ ಸಿಬ್ಬಂದಿ ತಿಳಿಸಿದ್ದರು. ಹೀಗಾಗಿ ಸ್ಥಳಕ್ಕೆ ಹಲಸೂರು ಗೇಟ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೋರ್ಟ್ ನಲ್ಲಿ ಬಾಂಬ್ ನಿಷ್ಟ್ರೀಯ ದಳ, ಶ್ವಾನದಳ ತಪಾಸಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಭಾರತದ ವಿದೇಶಾಂಗ ನೀತಿಯನ್ನು ಟ್ರಂಪ್ ಬಳಿ ಅಡವಿಟ್ಟಿದ್ದಾರೆ : ಪ್ರಿಯಾಂಕ್ ಖರ್ಗೆ